ಸುದ್ದಿವಿಜಯ, ಜಗಳೂರು: ಈಗಿನ ಕೋವಿಡ್ ಸಂದರ್ಭದಲ್ಲಿ ಚೈನಾ ಸೇರಿದಂತೆ ಅನೇಕ ರಾಷ್ಟ್ರಗಳ ಆರ್ಥಿಕವಾಗಿ ಹಿಂಜರಿಕೆ ಕಾಣುತ್ತಿರುವ ಹೊತ್ತಿನಲ್ಲಿ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಸುರಕ್ಷಿತವಾಗಿ ಇರಿಸುವಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗಳೂರು ಪಟ್ಟಣ ಸೇರಿದಂತೆ ತಾಲೂಕಿನ ಕೆಚ್ಚೇನಹಳ್ಳಿ ಮತ್ತು ಹೊಸಕೆರೆ ಗ್ರಾಪಂಗಳಲ್ಲಿ 22.50 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಆಧಾರಿತ ಕೆಲಸ ಮಾಡುತ್ತಿವೆ. ಹಿಂದುಳಿದ ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಎಸ್.ವಿ.ರಾಮಚಂದ್ರ ಅವರು 3500 ಕೋಟಿ ರೂ. ಹಣ ತಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 1336 ಕೋಟಿ ರೂ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆ ಮತ್ತು 426 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ57 ಕೆರೆ ತುಂಬಿಸುವ ಯೋಜನೆ ಬಜೆಟ್‍ನಲ್ಲಿ ಅತಿ ಹೆಚ್ಚು ಹಣ ಮೀಸಲಿಟ್ಟು ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಜನವರಿ ಅಂತ್ಯಕ್ಕೆ 57 ಕೆರೆಗಳಲ್ಲಿ 20 ಕೆರೆಗಳನ್ನು ತುಂಬಿಸುವ ಯೋಜನೆ ಕಾಮಗಾರಿ ಮುಗಿಯಲಿದೆ. ಶೀಘ್ರವೇ ಮುಖ್ಯಮಂತ್ರಿಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಅಪ್ಪರ್ ಭದ್ರಾ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರಿಗೆ ಸುಳ್ಳು ಹೇಳುವುದೇ ಅಭ್ಯಾಸವಾಗಿದೆ. 2004ರಲ್ಲಿ ಸಿದ್ದೇಶ್ವರ ಸತ್ತು ಹೋಗುತ್ತಾರೆ ಎಂದು ಅಪ ಪ್ರಚಾರ ಮಾಡಿದ್ದರು. ನಾನು ಈಗಲೂ ಗಟ್ಟಿಯಾಗಿದ್ದೇನೆ.
65 ವರ್ಷಗಳ ಕಾಂಗ್ರೆಸ್ ಆಡಳಿತದ ಪ್ರಚೀನ ಕೊಳೆಯನ್ನು ತೊಳೆಯಲು ಪ್ರಧಾನಿ ಮೋದಿ ಅವರ ನಮ್ಮ ಸರಕಾರ 10 ವರ್ಷ ಬೇಕಾಯಿತು. ಇನ್ನು ದೇಶದಲ್ಲಿ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಅದು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕೆಲ ಕಾಂಗ್ರೆಸ್ ನಾಯಕರು 57ಕೆರೆ ನೀರು ಬರುವುದು ಡೌಟ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜನ ಸೇವಕ. ಕೊಟ್ಟ ಮಾತಿನಂತೆ ನೀರು ತರಿಸಲು ಶತಸಿದ್ದ. ಕ್ಷೇತ್ರದ ಅಭಿವೃದ್ಧಿಗೆ 3500 ಕೋಟಿ ಹಣ ಸರಕಾರದಿಂದ ತರಲು ಸಂಸದ ಜಿ.ಎಂ.ಸಿದ್ದೇಶ್ವರ್ ಸಹಕಾರ ಕಾರಣ. ಕೆಲಸ ಮಾಡಿದವರನ್ನು ಗುರುತಿಸಿ ಮತ ಹಾಕಿ ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಪಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷೆ ನಿರ್ಮಲ ಕುಮಾರಿ, ಸದಸ್ಯರಾದ ಪಾಪಲಿಂಗಪ್ಪ, ಎಂಎಲ್‍ಎ ತಿಪ್ಪೇಸ್ವಾಮಿ, ನವೀನ್, ದೇವರಾಜ್, ಲಲಿತಮ್ಮ, ಮಾಜಿ ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್, ಗುತ್ತಿಗೆದಾರ ಎಸ್.ದೀಪಕ್ ಪಟೇಲ್, ತಾ.ಪಂ ಸದಸ್ಯ ಸಿದ್ದೇಶ್, ಕೆಚ್ಚೇನಹಳ್ಳಿ ಸಿದ್ದೇಶ್, ಮುಖಂಡರಾದ ಕೃಷ್ಣಮೂರ್ತಿ, ಶಿವಕುಮಾರ್, ಸಿದ್ದೇಶ್, ಪ್ರಕಾಶ್, ನಾರಾಯಣಸ್ವಾಮಿ, ಗ್ರಾ.ಪಂ ಅಧ್ಯಕ್ಷರಾದ, ಮಂಜಮ್ಮ, ಬೊಮ್ಮಣ್ಣ, ಸದಸ್ಯೆ ಸುನಿತಾ ಸಿದ್ದೇಶ್, ಚಂದ್ರಪ್ಪ, ಎಇಇ ತಿಪ್ಪೇಸ್ವಾಮಿ, ಪಿಡ್ಲ್ಯೂಡಿ ಎಇಇ ಯು.ರುದ್ರಪ್ಪ, ಸಾದಿಕ್‍ವುಲ್ಲಾ, ಹೊಸಕೆರೆ ನಾರಾಯಣಪ್ಪ, ಕಲ್ಲೇಶ್ ಸೇರಿದಂತೆ ಅನೇಕರು ಇದ್ದರು.
ಪ್ರಮುಖ ಕಾಮಗಾರಿಗಳು
ಜಗಳೂರು ಕೆರೆ ಏರಿಯ ರಸ್ತೆ ಅಭಿವೃದ್ಧಿಗೆ 2 ಕೋಟಿರೂ
ಎಕೆ ಕಾಲೂನಿ ಸಿಸಿ ರಸ್ತೆ-50 ಲಕ್ಷ
ಉರ್ದು ಶಾಲೆ ಅಭಿವೃದ್ಧಿಗೆ-13.90 ಲಕ್ಷ
ಕೆಚ್ಚೆನಹಳ್ಳಿ ಗ್ರಾಪಂನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂ.
ಹೊಸಕೆರೆ ಗ್ರಾಪಂ ನಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂ.
: