ಜಗಳೂರಿನಲ್ಲಿ ಬೃಹತ್ ಅಂಬೇಡ್ಕರ್ ಪುತ್ಥಳಿ ಅನಾವರಣ

Suddivijaya
Suddivijaya March 13, 2023
Updated 2023/03/13 at 1:46 PM

ಸುದ್ದಿವಿಜಯ, ಜಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರತಿ ವ್ಯಕ್ತಿಗೆ ಸ್ವತಂತ್ರ್ಯವಾಗಿ ಜೀವಿಸುವ ಹಕ್ಕು ಕಲ್ಪಿಸಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಮತದಾನ ಹಕ್ಕನ್ನು ಮಾರಿಕೊಳ್ಳಬೇಡಿ ಎಂದು ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವಾನಾಗಿದೇವ ಸ್ವಾಮಜಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತ ಎನ್ನುವುದು ಸ್ವತಃ ಮಗಳಿದ್ದಂತೆ, ಅಕ್ಕತಂಗಿಯರಿದ್ದಂತೆ, ತಾಯಿ ಇದ್ದಂತೆ ಅದನ್ನು ಹಣಕ್ಕಾಗಿ ಮಾರಾಟ ಮಾಡಿಕೊಳ್ಳುವುದು ಪಾಪದ ಕೆಲಸ. ಭಾರತ ಸಂವಿಧಾನ ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹದ್ದು ಅಮೂಲ್ಯ ಗ್ರಂಥವಾಗಿದೆ. ಜನರು ತಮ್ಮ ತಮ್ಮ ಧರ್ಮ ಗ್ರಂಥಗಳ ಜೊತೆಗೆ ಮನೆಯಲ್ಲಿ ಸಂವಿಧಾನದ ಗ್ರಂಥವನ್ನು ದೇವರ ಕೋಣೆಯಲ್ಲಿ ಪೂಜಿಸಬೇಕು. ಅದರಂತೆ ಪರಿಪಾಸಲಿಸಿ. ಜಾತಿಯತೆ ಹೋಗಲಾಡಿಸಿ ಸಮಾನತೆ ನೀಡಿದೆ. ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಶಕ್ತಿ ನೀಡಿದೆ ಎಂದರು.

ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಅಂಬೇಡ್ಕರ್ ದಲಿತ, ಹಿಂದುಳಿದ ಅಲ್ಪ ಸಂಖ್ಯಾತರ ಪಾಲಿನ ಬೆಳಕಾಗಿದ್ದಾರೆ. ಅವರು ಈ ಭೂಮಿಯಲ್ಲಿ ಜನಿಸದೇ ಇದ್ದಿದ್ದರೇ ಭಾರತ ಸಂವಿಧಾನ ಕಾಣಲು ಅಸಾಧ್ಯವಾಗಿತ್ತು. ತಮ್ಮ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದರು ಅವುಗಳೆನ್ನೆಲ್ಲಾ ಬದಿಗಿಟ್ಟು ದಲಿತ ಸಮುದಾಯದ ಅಭಿವೃದ್ದಿಗೆ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕರನ್ನು ಎಲ್ಲರು ಸ್ಮರಿಸಿ ಪೂಜಿಸಬೇಕು. ಪ್ರತಿ ಕುಟುಂಬದಲ್ಲೂ ಶಿಕ್ಷಣವಂತರಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಅವರನ್ನು ವಿಶ್ವ ಸಂಸ್ಥೆಯೂ 125ನೇ ವರ್ಷವನ್ನು ವಿಶ್ವಜ್ಞಾನದ ದಿನವನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಇಡೀ ಪ್ರಪಂಚವೇ ಇಂದು ಕೊಂಡಾಡುತ್ತಿದೆ ಎಂದರೆ ಅವರ ಜ್ಞಾನ ಎಷ್ಟಿದೆ ಎಂಬುವುದನ್ನು ಚಿಂತನೆ ಮಾಡಬೇಕು. ಅವರ ವಿಚಾರ ಧಾರೆಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದರು.

ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಮಾಜಕ್ಕೆ ಏನಾದರೂ ಗುರುತನ್ನು ಬಿಟ್ಟು ಹೋಗಬೇಕು. ಆ ಕೆಲಸವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಭಾರತ ಸಂವಿಧಾನವನ್ನು ಬರೆದ ಎಲ್ಲರು ಸಮಾನತೆಯನ್ನು ಕಲ್ಪಿಸಿದ ಮಹಾತ್ಯಾಗಿಯಾಗಿದ್ದಾರೆ. ಅವರನ್ನು ಜೀವನದುದ್ದಕ್ಕೂ ಸ್ಮರಿಸಿದರು ಅವರ ಋಣ ತೀರಿಸಲು ಸಾಧ್ಯವಿಲ್ಲವೆಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್‍ಕುಮಾರ್, ತಾ.ಪಂ ಇಒ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ, ಸ.ನೌ. ಸಂಘದ ಅಧ್ಯಕ್ಷ ಬಿ.ಆರ್ ಚಂದ್ರಪ್ಪ, ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಕುಮಾರಿ, ಸದಸ್ಯ ಲಲೀತಮ್ಮ, ವಕೀಲರ ಸಂಘ ಅಧ್ಯಕ್ಷ ಓಂಕಾರೇಶ್ವರ, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್ ಚಿನದಾನಂದ, ಪುತ್ಥಳಿ ಸಮಿತಿ ಅಧ್ಯಕ್ಷ ಎ. ಸಿದ್ದಪ್ಪ ಪೂಜಾರಿ, ಸದಸ್ಯ ಶಿವಣ್ಣ, ಎಸ್ಸಿ.ಎಸ್ಟಿ ಜಾಗೃತಿ ಸಮಿತಿ ಸದಸ್ಯ ಸತೀಶ್ ಮಾಚಿಕೆರೆ, ಮುಖಂಡರಾದ ಜಿ.ಎಚ್ ಮಹೇಶ್, ಗೌರಿಪುರ ಕುಬೇರಪ್ಪ, ಗಾಯಕ ಮೋರಾರ್ಜಿ ಸೇರಿದಂತೆ ಮತ್ತಿತರಿದ್ದರು.

 ಮೆರವಣಿಗೆ ಚಾಲನೆ 

ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಹಿನ್ನೆಲೆ ಹಮ್ಮಿಕೊಂಡಿದ್ದ ಅದ್ದೂರಿ ಮೆರವಣಿಗೆ ತಹಸೀಲ್ದಾರ್ ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಚಾಲನೆ ನೀಡಿದರು. ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಸಾರೋಟ್‍ನಲ್ಲಿ ಕೂರಿಸಲಾಯಿತು.
ಚಿತ್ರದುರ್ಗದ ಬ್ರಾಸ್ ಬ್ಯಾಂಡ್‍ನಿಂದ ದಲಿತ ನಾಯಕ ಅಂಬೇಡ್ಕರ್ ಕುರಿತು ಕಂಠಗಾನ ಮಾಡಿದರು. ಡೊಳ್ಳು ಕುಣಿತ, ಗೊಂಬೆ ಕುಣಿತ, ಡ್ರೆಮ್‍ಸೆಟ್, ನಾಸಿಕ್ ಡೋಲ್, ಮಹಿಳಾ ತಂಡದ ತಮಟೆ ಸದ್ದು ಸೇರಿದಂತೆ 23ಕ್ಕೂ ಹೆಚ್ಚು ಕಲಾ ತಂಡಗಳ ಮೆರವಣಿಗೆಯೂ ನೋಡುಗರ ಗಮನ ಸೆಳೆಯಿತು. ಹಳೆ ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಹೊಸ್ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೂ ಸಾಗಿದ ಮೆರವಣಿಗೆಯಲ್ಲಿ ಜನಪ್ರತಿನಿದಿಗಳು, ಮುಖಂಡರು, ಯುವಕರು, ಮಹಿಳೆಯರು, ವೃದ್ದರೋಪಾಧಿಯಾಗಿ ಕುಣಿದು ಕುಪ್ಪಳಿಸಿದರು.

 

ಪ್ರತಿಮೆ ಅನಾವರಣ:
ಮದ್ಯಾಹ್ನ 2 ಗಂಟೆಗೆ ಶಾಸಕ ಎಸ್.ವಿ ರಾಮಚಂದ್ರ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಅಂಬೇಡ್ಕರ್ ಮುಖ ಕಾಣುತ್ತಿದ್ದಂತೆ ಸುತ್ತಮುತಲು ನೆರದಿದ್ದ ಅಭಿಮಾನಿಗಳಿಂದ ಜೈ ಭೀಮ್, ಜೈ ಭೀಮ್ ಎಂಬ ಘೋಷಣೆಗಳು ಮೊಳಗಿದವು. ನೀಲಿ ಬಾವುಟಗಳು ರಾರಾಜಿಸಿದವು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!