ಜಗಳೂರು:’ಮಹಾನ್ ನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ಬೃಹತ್ ಪುತ್ಥಳಿಪುತ್ಥಳಿ ಅನಾವರಣ

Suddivijaya
Suddivijaya March 12, 2023
Updated 2023/03/13 at 12:14 AM

ಸುದ್ದಿವಿಜಯ,ಜಗಳೂರು:  ಭಾರತದ ಸಂವಿಧಾನ ಶಿಲ್ಪಿ, ದಲಿತರ ಆರಾಧ್ಯ ದೈವ, ಇಡೀ ಜೀವನವನ್ನೇ ದಲಿತದ ಏಳ್ಗೆಗಾಗಿ ಮೀಸಲಿಟ್ಟ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಪುತ್ಥಳಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅನಾವರಣಗೊಳ್ಳಲಿದೆ.

ಹೌದು, ಪಟ್ಟಣದ ಬೆಸ್ಕಾಂ ಕಚೇರಿಯ ಮುಂದೆ ನಿರ್ಮಾಣವಾಗಿರುವ ಬೃಹತ್ ವೃತ್ತದಲ್ಲಿ ದಲಿತ ನಾಯಕ, ದಲಿತರ ಹಕ್ಕುಗಳ ಹೋರಾಟಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಐಕ್ಯತೆಗಾಗಿ ಜೀವನ ಸವೆಸಿದ ಮಹಾನ್ ಮಾನವತಾವಾದಿ, ಬುದ್ಧ ಪ್ರಜ್ಞೆಯ ದಲಿತರ ದೇವರಾದ ಡಾ.ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಕ್ಕೆ ಕ್ಷಣ ಗಣನೆ ಆರಂಭವಾಗಿದೆ.

ವಿವಿಧ ಬಗೆಯ ಹೂವುಗಳಿಂದ ಪ್ರತಿಮೆಯನ್ನು ಸಿಂಗಾರಗೊಳಿಸಲಾಗುತ್ತಿದೆ. ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ, ದಲಿತ ನಾಯಕರ, ದಲಿತ ಮನಸ್ಸುಗಳ ಸುದೀರ್ಘ ಸುಮಾರು 20 ವರ್ಷಗಳ ಹೋರಾಟದ ಪ್ರತಿಫಲವಾಗಿ ಈ ಪ್ರತಿಮೆಗೆ ಜೀವ ಕಳೆ ಬರುವ ಕ್ಷಣ ಸನಿಹವಾಗಿದೆ.

ಶಾಸಕ ಎಸ್.ವಿ.ರಾಮಚಂದ್ರ ಅವರ ಸಂಪೂರ್ಣ ಬೆಂಬಲ, ಸಹಕಾರದೊಂದಿಗೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಕಾಳಜಿಯಿಂದ ಅಂದಾಜು 12ಲಕ್ಷ ರೂ ವೆಚ್ಚದ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ ಅವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅಷ್ಟೇ ಅಲ್ಲದೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಆಗಮಿಸುವ ನಿರೀಕ್ಷೆಯಿದೆ. ಪರಿಷತ್ ಸದಸ್ಯ ರವಿಕುಮಾರ್ ಹಾಗೂ ಅಂಬೇಡ್ಕರ್ ಬಗ್ಗೆ ಹೆಸರಾಂತ ವಾಗ್ಮಿ, ಚಿಂತಕ, ದಲಿತರ ಆರಾಧ್ಯ ದೈವ ಪ್ರೊ. ಸಿ.ಕೆ. ಮಹೇಶ್ ಅವರ ಉಪನ್ಯಾಸ ನೀಡಲಿದ್ದಾರೆ.

ಶಾಸಕ ಎಸ್.ವಿ.ರಾಮಚಂದ್ರ ಅವರು ಈ ಪ್ರತಿಮೆ ನಿರ್ಮಾಣಕ್ಕೆ 12 ಲಕ್ಷ ರೂ. ಅನುದಾನ ನೀಡಿದ್ದಾರೆ. ಅಷ್ಟೇ ಅಲ್ಲದೇ ದಲಿತ ಸಂಘಟನೆಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಕಾರದಿಂದ ದಲಿತ ನಾಯಕರ ಪುತ್ಥಳಿ ಅನಾವರಣಗೊಳ್ಳಲಿದೆ.

ಕಲಾ, ಸಾಂಸ್ಕøತೀಕ ವೈಭವದ ಮೆರಗು:
ನಾಳೆ ಸೋಮವಾರ ಜಗಳೂರು ಪಟ್ಟಣದಲ್ಲಿ ಸಾಂಸ್ಕøತೀಕ ಗತವೈಭವ ಸೃಷ್ಟಿಯಾಗಲಿದೆ. ಸಾಂಸ್ಕøತಿಕ ಉತ್ಸವಗಳ ಮೆರಗು ಇಡೀ ಪಟ್ಟಣದಲ್ಲೇ ಸದ್ದು ಮಾಡಲಿದೆ.

ಚಿತ್ರದುರ್ಗ ಶಾರದಾ ಬ್ರಾಸ್ ಬ್ಯಾಂಡ್ ನಿಂದ ದಲಿತ ನಾಯಕನ ಕುರಿತು ಕಂಠಗಾಯನ, ಹೊಸದುರ್ಗದ ತಾಲೂಕಿನ 23 ವಿವಿಧ ಬಗೆಯ ಛದ್ಮವೇಷದಾರಿಗಳ (ಗೊಂಬೆ)ಕುಣಿತ, ಹುಲ್ಲೂರು ಗ್ರಾಮದ ಹೆಣ್ಣುಮಕ್ಕಳ ತಮಟೆ ಸದ್ದು, ಚಿತ್ರದುರ್ಗದ ಕಲಾತಂಡದಿಂದ ನಾಸಿಕ್ ಡೋಲು, ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಡೊಳ್ಳುಕುಣಿತ ಸೇರಿ ವಿವಿಧ ಕಲಾಪ್ರಕಾರಗಳ ಪ್ರದರ್ಶನ ನೋಡುಗರನ್ನು ಮಂತ್ರಮುಗ್ದವಾಗಿಸಲಿದೆ.

ಪುತ್ಥಳಿ ಅನಾವರಣಗೊಂಡ ನಂತರ ತಹಶೀಲ್ದಾರ್ ಕಚೇರಿಯ ಮುಂದೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರದ ಸಚಿವರಾದ ನಾರಾಯಣ ಸ್ವಾಮಿ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕ ಎಸ್.ವಿ.ರಾಮಚಂದ್ರ,

ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ತಾಪಂ ಇಓ ವೈ.ಎಚ್.ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಮಾದಿಗದಂಡೋದ ನಾಯಕರು ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ರುವಾರಿಗಳಾದ ಯುವ ಜೆಡಿಎಸ್ ಮುಖಂಡ ರುದ್ರೇಶ್, ಪೂಜಾರ್ ಸಿದ್ದಪ್ಪ, ವಕೀಲರಾದ ಹನುಮಂತಪ್ಪ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಹನುಮಂತಾಪುರ ಸತೀಷ್, ಭೈರನಾಯಕನಹಳ್ಳಿ ಚಂದ್ರಪ್ಪ ಇವರ ಸಹಕಾರದಿಂದ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳ್ಳಲಿದೆ.

ಬಹುದಿನಗಳ  ಕನಸು ನನಸು:
ದಲಿತ ಸಮುದಾಯಗಳ ಬಹುದಿನಗಳ ಕನಸು ಅಂಬೇಡ್ಕರ್ ಪುತ್ಥಳಿ ಅನಾವರಣದಿಂದ ನನಸಾಗಲಿದೆ. ಇಡೀ ದೇಶಕ್ಕೆ ಏಕ ಸಂವಿಧಾನ ಮತ್ತು ಸಂವಿಧಾನದ ಮೂಲಕ ಸಮಾನತೆಯ ಬಗ್ಗೆ ಲಿಖಿತವಾಗಿ ಬರೆದು ಕಾನೂನು ರೂಪಿಸಿದ ಮಹಾನ್ ನಾಯಕ ಅವರು. ಅವರ ಪ್ರತಿಮೆಯನ್ನು ಈ ಸಂದರ್ಭದಲ್ಲಿ ಅನಾವರಣಗೊಳ್ಳುತ್ತಿರುವುದು ಸಂತೋಷ ತಂದಿದೆ.
-ಎಸ್.ವಿ.ರಾಮಚಂದ್ರ, ಶಾಸಕ

 ಅತೀವ ಸಂತೋಷ ತಂದಿದೆ
ಮಹಾನ್ ನಾಯಕ, ಇಡೀ ವಿಶ್ವದಲ್ಲೇ ಬೃಹತ್ ರಾಷ್ಟ್ರವಾಗಿರುವ ಭಾರತದಲ್ಲಿ ಬಲಿಷ್ಠ ಸಂವಿಧಾನವನ್ನು ನೀಡಿದ ದಲಿತರ ಆರಾಧ್ಯ ದೈವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣದಿಂದ ದಲಿತ ಮುಖಂಡರು ಸೇರಿದಂತೆ ಎಲ್ಲ ವರ್ಗಗಳ ನಾಯಕರಿಗೆ ಅತೀವ ಸಂತೋಷ ತಂದಿದೆ.
-ಬಿ.ಮಹೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಜಗಳೂರು

Share this Article
Leave a comment

Leave a Reply

Your email address will not be published. Required fields are marked *

error: Content is protected !!