ಸುದ್ದಿವಿಜಯ,ಜಗಳೂರು: ಧರ್ಮಕ್ಕಿಂತ ದಯೆ, ವಿದ್ಯೆಗಿಂತ ನೀತಿ, ಗಣಕ್ಕಿಂತ ಗುಣ ದೊಡ್ಡದು. ಇದನ್ನೇ ವಚನ ಸಾಹಿತ್ಯದಲ್ಲಿ ಬಸವಾದಿ ಪ್ರಮತರಿಂದ ಪ್ರತಿಯೊಬ್ಬ ವಚನಕಾರರು 12ನೇ ಶತಮಾನದಲ್ಲಿ ಪ್ರತಿಪಾದಿಸಿಕೊಂಡು ಬಂದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ಸಿಗಲು ವಚನ ಸಾಹಿತ್ಯದ ಕೊಡುಗೆ ಅನ್ಯನ್ಯ ವಾದುದು ಎಂದು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿ ಜಯಪ್ಪ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗಳೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇರವ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಚನ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬದುಕಿಗೆ ಬೇಕಾದದನ್ನು ವಚನಗಳಲ್ಲಿ ವಿವರಿಸಲಾಗಿದೆ. ಕನ್ನಡ ಭಾಷೆಯಲ್ಲಿ ದಾಸ ಸಾಹಿತ್ಯ, ನವ್ಯ ಸಾಹಿತ್ಯ, ನವೋದಯ, ದಲಿತ ಸಾಹಿತ್ಯ ಹೀಗೆ ಅನೇಕ ಸಾಹಿತ್ಯದ ಪ್ರಕಾರಗಳಿವೆ ಆದರೆ ಅದಕ್ಕೂ ಮುಂಚೆ 12 ಶತಮಾನದಲ್ಲಿ ಮಹಾಮನೆಯಲ್ಲಿ ಹುಟ್ಟಿದ ವಚನ ಸಾಹಿತ್ಯ ಎಲ್ಲ ಸಾಹಿತ್ಯಗಳ ಬೇರು ಎಂದರು.
ಇಂತಹ ವಚನ ಸಾಹಿತ್ಯವನ್ನು ತಾಳೆಗರಿಗಳಿಂದ ಮುದ್ರಣಕ್ಕೆ ತಂದ ವಚನ ಸಾಹಿತ್ಯದ ಪಿತಾಮಹಾ ಫ.ಗು.ಹಳಕ್ಕಟ್ಟಿ ಅವರ ಸ್ಮರಣಾರ್ಥ ವಚನ ದಿನಾಚರಣೆ ವಿದ್ಯಾರ್ಥಿಗಳ ಜೀವನಕ್ಕೆ ಅಗತ್ಯವಾಗಿದೆ. ಎಲ್ಲರೂ ಊಟಕ್ಕೆ ಮೊದಲು ವಚನಗಳನ್ನು ಹೇಳುವ ಮೂಲಕ ವಚನಗಳ ಮಹತ್ವವನ್ನು ಅರ್ಥಮಾಡಿಕೊಂಡು ಜೀವನದುದ್ದಕ್ಕೂ ಅನುಸರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ನಿವೃತ್ತ ಪ್ರಚಾರ್ಯ, ಸಾಹಿತಿ ಪ್ರಭಾಕರ್ ಲಕ್ಕೋಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಫ.ಗು. ಹಳಕಟ್ಟಿ ಅವರನ್ನು ಕನ್ನಡ ಮ್ಯಾಕ್ಸ್ ಮುಲ್ಲರ್ ಎಂದೇ ಕರೆಯುತ್ತೇವೆ. ತಮ್ಮ ಜೀವಿತ ಅವಧಿಯಲ್ಲಿ ವಕೀಲರಾಗಿದ್ದ ಅವರು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಓದುಗರಿಗೆ ಉಣಬಡಿಸಲು ಎಲ್ಲವನ್ನೂ ಕಳೆದುಕೊಂಡು ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟುರು.
300 ವಚನಕಾರರ ವನಗಳನ್ನು ಮುದ್ರಿಸಿ ವಚನಗಳಲ್ಲಿರುವ ಜಾತ್ಯತೀತ ಮನೋಭಾವವನ್ನು ಜನರಿಗೆ ವಸ್ತುನಿಷ್ಠವಾಗಿ ಮುದ್ರಿಸಿ ಅರ್ಥವನ್ನು ಬಿಡಿಸಿದ್ದು ಅವರ ಸಾಧನೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ, ಫ.ಗು.ಹಳಕಟ್ಟಿ ಅವರ ಜನ್ಮದಿನದಂದ ಸರಕಾರವೇ ವಚನ ದಿನಾಚರಣೆ ಮಾಡುತ್ತಾ ಬಂದಿರುವುದು ಸಂತೋಷ. ವಕೀಲರಾಗಿ ಅವರು ಹೆಚ್ಚು ಸಂಪಾದಿಸಬಹುದಿತ್ತು. ಆದರೆ ಮನೆ-ಆಸ್ತಿ ಪಾಸ್ತಿ ಮಾರಿ 175 ವಚನ ಕೃತಿಗಳನ್ನು ಮುದ್ರಿಸಿದರು. 1956ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಕೊಡಲಾಯಿತು. ಅವರ ಜೀವನವೇ ಒಂದು ಅದ್ಭುತ ಯಶೋಗಾಥೆ ಎಂದು ಕೊಂಡಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ಮಕ್ಕಳಿಗೆ ವಚನ ಸಾಹಿತ್ಯ ಮಹಾ ಸಂಗಮವಾಗಬೇಕು. ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ವಚನ ಸಾಹಿತ್ಯವನ್ನು ಬಿತ್ತುವ ಕಾರ್ಯವಾಗಬೇಕು ಎಂದರು ಶಿಕ್ಷಕರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ರೂಪಕಲಾ ಜಿ., ಗೌರಮ್ಮ, ಕೆ.ಸುಜಾತಮ್ಮ, ಬಿ.ಎನ್‍ಎಂ.ಸ್ವಾಮಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಎಸ್.ಚಿದಾನಂದ, ಡಿ.ಸಿ.ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.