ಸುದ್ದಿವಿಜಯ, ಜಗಳೂರು: ತಾಲೂಕಿನ ಬಿಳಿಚೋಡು ಹೋಬಳಿಯ ಚದರಗೊಳ್ಳ ಗ್ರಾಮದಲ್ಲಿರುವ ಸರಕಾರಿ ಜಮೀನು ಒತ್ತುವರಿಯಾಗಿದ್ದು ತಾಲೂಕು ಆಡಳಿತ ಜಮೀನು ತೆರವುಗೊಳಿಸದಿದ್ದರೆ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಚದರಗೊಳ್ಳ ಗ್ರಾಮದಲ್ಲಿರುವ ಸನಂ 62/1ರಲ್ಲಿರುವ 13.12 ಎಕರೆ ಸರಕಾರಿ ಜಮೀನು ಇದ್ದು ಅದು ಗ್ರಾಮಠಾಣಕ್ಕೆ ಸಂಬಂಧಿಸಿದ್ದಾಗಿದೆ.
ಅದರಲ್ಲಿ ಪಶು ಆಸ್ಪತ್ರೆ, ಶಾಲೆ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ, ಶಾಲಾ ಆಟದ ಮೈದಾನ ಸೇರಿದಂತೆ ಇತರೆ ಸಾರ್ವಜನಿಕ ಉಪಯೋಗಕ್ಕಾಗಿ ಬಳಕೆಯಾಗಬೇಕು.
ಆದರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿರುವ ಅನೇಕರು ಒತ್ತುವರಿ ಮಾಡಿದ್ದಾರೆ. ಕಣಗಳನ್ನು ನಿರ್ಮಿಸಿಕೊಂಡಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಜಾಗವನ್ನು ತಕ್ಷಣವೇ ತೆರೆವುಗೊಳಿಸಬೇಕು.
ಇಲ್ಲವಾದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಅನೇಕ ಬಾರಿ ಅರ್ಜಿಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮದ ಗ್ರಾಪಂ ಸದಸ್ಯರಾದ ದ್ರಾಕ್ಷಯಣಮ್ಮ, ಆರ್ ಐ ಧನಂಜಯ, ಪಿ.ದ್ಯಾಮಣ್ಣ, ಸಿ.ಎಚ್.ಚಂದ್ರಪ್ಪ, ಜಿ.ಮುನಿಯಪ್ಪ, ನಾಗಪ್ಪ, ಗೋವಿಂದಪ್ಪ, ಸಂತೋಷ್ ಸೇರಿದಂತೆ ಅನೇಕರು ಇದ್ದರು