ಸುದ್ದಿವಿಜಯ, ಜಗಳೂರು: ಪ್ರಜಾಪ್ರಭುತ್ವದಲ್ಲಿ ಚುನಾವಣೆ ದೊಡ್ಡ ಹಬ್ಬ. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದೇ ನಿಮ್ಮ ವೈಯಕ್ತಿಕ ಹಕ್ಕನ್ನು ಚಲಾಯಿಸಿ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಮತದಾರರಿಗೆ 2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಹಾಗೂ ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್) ಕಾರ್ಯವೈಖರಿ ಕುರಿತಂತೆ ಪ್ರಾತ್ಯಕ್ಷಿತೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಹಕ್ಕಿನಿಂದ ವಂಚಿತರಾಗಬಹುದು.
ಆದರೆ, ಮತದಾನದಿಂದ ದೂರ ಉಳಿಯಬಾರದು. ಪ್ರತಿಯೊಬ್ಬ ಮತದಾರರು ತಪ್ಪದೇ ತಮ್ಮ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿಯೊಂದಿಗೆ ಮತದಗಟ್ಟೆಗೆ ತೆರಳಿ ಮತದಾನ ಮಾಡಬೇಕು. ವಿಶೇಷ ಚೇತನರು ಮತಗಟ್ಟೆಗೆ ತೆರಳಲು ವ್ಯವಸ್ಥೆಯಿರುತ್ತದೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಇಷ್ಟ ಮಿತ್ರರಿಗೆ ತಮ್ಮದೇ ಮತದಾನ ಮಾಡಲು ಪ್ರೇರೇಪಿಸಬೇಕು.
ಇವಿಎಂ ಬಳಕೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಕಣದಲ್ಲಿರುವ ಅಭ್ಯರ್ಥಿಗಳು ಮುಂದೆ ಅವರ ಪಕ್ಷದ ಅಥವಾ ಸ್ವಾತಂತ್ರ್ಯ ಅಭ್ಯರ್ಥಿಯಾಗಿದ್ದರೆ ಅವರಿಗೆ ನೀಡಿದ ಗುರುತಿನ ಸಿಂಬಲ್ ನಮೂದಾಗಿರುತ್ತದೆ.
ಮತ ಚಲಾಯಿಸುವಾಗ ಒಮ್ಮೆ ಮಾತ್ರ ಬಟನ್ ಒತ್ತಬೇಕು. ಚುನಾವಣೆ ವೇಳೆ ಮೊಬೈಲ್‍ನಲ್ಲಿ ಚಿತ್ರೀಕರಿಸುವುದು ಅಕ್ಷಮ್ಯ ಅಪರಾಧ. ಅಂತಹ ಅಹಿತಕ ಘಟನೆಗಳಿಗೆ ಚುನಾವಣಾ ಆಯೋಗ ಆಸ್ಪದ ಮಾಡಿಕೊಡುವುದಿಲ್ಲ ಎಂದರು.
ಈವೇಳೆ ತಾಲೂಕು ಕಚೇರಿಗೆ ಆಗಮಿಸಿದ್ದ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಮತದಾರರಿಗೆ ಮತದಾನ ಹೇಗೆ ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಪಪಂ ಚೀಫ್ ಆಫೀಸರ್ ಲೋಕಾನಾಯ್ಕ್, ಪಪಂ ಚೀಫ್ ಆಫೀಸರ್ ಕಿಫಾಯತ್ ಅಹ್ಮದ್, ಕಂದಾಯ ನಿರೀಕ್ಷಕ ಮೊಹಿದ್ದೀನ್ ಸೇರಿದಂತೆ ಅನೇಕರು ಪ್ರಾತ್ಯಕ್ಷಿತೆಯಲ್ಲಿ ಭಾಗವಹಿಸಿದ್ದರು.