ಜಗಳೂರು ತಾಲೂಕು ಬರಪೀಡಿತ ಘೋಷಣೆಗೆ ರೈತರ ಪ್ರತಿಭಟನೆ

Suddivijaya
Suddivijaya August 21, 2023
Updated 2023/08/21 at 12:18 PM

ಸುದ್ದಿವಿಜಯ, ಜಗಳೂರು: ಈಗಾಗಲೇ ಕಳೆದ ಒಂದು ತಿಂಗಳಿಂದ ತಾಲೂಕಿನಾದ್ಯಂತ ಮಳೆ ಬಾರದೇ ಬರದ ಛಾಯೆ ಆವರಿಸಿದ್ದು ತಕ್ಷಣವೇ ಜಿಲ್ಲಾ ಮತ್ತು ತಾಲೂಕು ಆಡಳಿತ ಬರಪೀಡಿತ ತಾಲ್ಲೂಕು ಎಂದು ಜಗಳೂರನ್ನು ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ರೈತರು ಸೋಮವಾರ ಪ್ರತಿಭಟನೆ ತಾಲ್ಲೂಕು ಕಚೇರಿಗೆ ದಾವಿಸಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಮಳೆಯಿಲ್ಲದೇ ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿದಂತೆ ಎಲ್ಲ ಬೆಳೆಗಳು ಒಣಗಿವೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ತಾಲೂಕಾಗಿರುವ ಜಗಳೂರನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು.

ಸಮಯಕ್ಕೆ ಸರಿಯಾಗಿ ಮಳೆ ಬಾರದ ಹಿನ್ನೆಲೆ ಫಸಲುಗಳು ಒಣಗುತ್ತಿವೆ ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ದಂಡಾಧಿಕಾರಿಗಳು ಸರ್ವೆ ನಡೆಸಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ, ಬಾಡುತ್ತಿರುವ ಬೆಳೆಯಿಂದ ಜನರು ಗುಳೆ ಹೋಗುತ್ತಿದ್ದಾರೆ. ಫಸಲ್ ಬೀಮಾ ಯೋಜನೆ ತಕ್ಷಣವೇ ಜಾರಿಯಾಗಬೇಕು. ಕೊಳವೆ ಬಾವಿಗಳಿಗೆ ಸರಿಯಾದ ಗುಣಮಟ್ಟದ ವಿದ್ಯುತ್ ಸರಬರಾಜು ಆಗಬೇಕು.

ರೈತರಿಗೆ ಸರಕಾರ ನೆರವಿಗೆ ದಾವಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತೇವೆ ಎಂದು ಆಗ್ರಹಿಸಿದರು.

ಇದೇ ವೇಳೆ ರೈತ ಸಂಘದ ಗೌರವಾಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ, ಹಸಿರು ಸೇನೆ ಅಧ್ಯಕ್ಷ ವೀರೇಶ್ ಚಿಕ್ಕಬನ್ನಿಹಟ್ಟಿ, ಪ್ರಹ್ಲಾದಪ್ಪ, ಮಡ್ರಳ್ಳಿ ತಿಪ್ಪೇಸ್ವಾಮಿ, ಸಹದೇವರೆಡ್ಡಿ, ಎ.ಡಿ.ಚನ್ನಪ್ಪ, ಕೆ.ಬಿ.ತಿಪ್ಪೇಸ್ವಾಮಿ, ತಿಪ್ಪೇರುದ್ರಸ್ವಾಮಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!