ಸುದ್ದಿವಿಜಯ,ಜಗಳೂರು: ಸುಟ್ಟು ತಿಂಗಳಾದರೂ ಟ್ರ್ಯಾನ್ಸ್ ಫಾರ್ಮರ್ ಕೊಡದೇ ಸತಾಯಿ ಸುತ್ತಿರುವ ಬೆಸ್ಕಾಂ ಇಲಾಖೆ ಎಇಇ ಗಿರೀಶ್ ನಾಯ್ಕ್ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಟ್ರ್ಯಾನ್ಸ್ ಫಾರ್ಮರ್ ಕೇಂದ್ರಕ್ಕೆ ಶುಕ್ರಮವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆ ಆರಂಭವಾಗಿದ್ದು ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿದೆ. ವೋಲ್ಟೇಜ್ ವ್ಯತ್ಯಯದಿಂದ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಟಿಸಿಗಳು ಸುಟ್ಟು ಹೋಗಿ ತಿಂಗಳುಗಳೇ ಕಳೆದರೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ರೈತರಿಗೆ ಟ್ರ್ಯಾನ್ಸ್ ಫಾರ್ಮರ್ ನೀಡುತ್ತಿಲ್ಲ ಬೆಳೆಗಳು ಒಣಗುತ್ತಿವೆ ಎಂದು ಬೇಡಿಕೊಂಡರೂ ಖ್ಯಾರೆ ಅನ್ನುತ್ತಿಲ್ಲ ಎಂದು ಬಿದರಕೆರೆ ಗ್ರಾಮದ ರೈತ ರೇವಣಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಟಿಸಿಗಳು ಸುಟ್ಟು ತಿಂಗಳು ಕಳೆದಿವೆ. ಕೇಳಿದರೆ ನಾಳೆ ಬಾ, ನಾಡಿದ್ದು ಬಾ ಎಂದು ಗಿರೀಶ್ ನಾಯ್ಕ್ ಅವರು ರೈತರಿಗೆ ಹಾರಿಕೆ ಉತ್ತರ ನೀಡುತ್ತಾರೆ. ‘ನಾಳೆ ಬಾ’ ಎಂದು ಬೋರ್ಡ್ ಹಾಕಿ ಬಿಡಲಿ ಎಂದು ಕಿಡಿಕಾರಿದರು.
ಫಲಕ್ಕೆ ಬಂದಿರುವ ಮತ್ತು ಈಷ್ಟೇ ನಾಟಿ ಮಾಡಿರುವ ಅಡಕೆ, ಬಾಳೆ, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ತರಕಾರಿ ಬೆಳೆಗಳಿಗೆ ಸಧ್ಯ ನೀರಿನ ಅವಶ್ಯಕತೆಯಿದೆ. ಟ್ರ್ಯಾನ್ಸ್ ಫಾರ್ಮರ್ ಸುಟ್ಟು ಬೆಳೆಗಳು ಒಣಗುತ್ತಿವೆ. ಡಿಸೆಂಬರ್ ಆರಂಭದಿಂದಲೂ ಟಿಸಿಗಳನ್ನು ಕೊಡಿ ಎಂದು ಬೆಸ್ಕಾಂಗೆ ಅಲೆಯುತ್ತಿದ್ದೇವೆ. ಆದರೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ.
ಆಯಿಲ್ ಬಂದಿಲ್ಲ, ಟಿಸಿಗಳ ಉಪಕರಣಗಳು ಬಂದಿಲ್ಲ ಎಂದು ಇಲ್ಲಸಲ್ಲದ ಸಬೂಬು ಹೇಳುತ್ತಲ್ಲೇ ಬೆಸ್ಕಾಂ ಇಲಾಖೆ ಎಇಇ ಗಿರೀಶ್ ನಾಯ್ಕ್ ಕಾಲಕಳೆಯುತ್ತಿದ್ದಾರೆ. ಅಧಿಕಾರಿಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಕೆ.ತಿಪ್ಪೇಸ್ವಾಮಿ ಕಿಡಿಕಾರಿದರು.
ಬಿದರಕೆರೆ, ನಿಬಗೂರು, ಮಠದ ದ್ಯಾಮೇನಹಳ್ಲಿ, ಕ್ಯಾಸೇನಹಳ್ಳಿ, ಮುಸ್ಟೂರು, ಚಿಕ್ಕಮ್ಮನಹಟ್ಟಿ, ಬಿಸ್ತುವಳ್ಳಿ, ಎಚ್.ಎಂ.ಹೊಳೆ, ಪಲ್ಲಾಗಟ್ಟೆ ಗ್ರಾಮಸ್ಥರು ಸೇರಿದಂತೆ ಅನೇಕ ಹಳ್ಳಿಗಳಿಂದ ಬಂದ ನೂರಾರು ಗ್ರಾಮಸ್ಥರು ದಾವಣಗೆರೆ ರಸ್ತೆಯಲ್ಲಿರುವ ವಿದ್ಯುತ್ ಟ್ಯ್ರಾನ್ಸ್‍ಫಾರ್ಮರ್ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು.
ನೀರಿಲ್ಲದೇ ಪರಿತಪಿಸುತ್ತಿರುವ ಗ್ರಾಮಸ್ಥರು:
ದಿಬ್ಬದಹಟ್ಟಿ ಗ್ರಾಮದ ಟಿಸಿ ಸುಟ್ಟು ಎರಡು ತಿಂಗಳಾಗಿವೆ ನೀರಿಗೆ ಹಾಹಾಕಾರ ಉಂಟಾಗಿದೆ. ಟಿಸಿ ಕೇಳಿದರೆ ಅಧಿಕಾರಿಗಳು ತುಟಿಬಿಚ್ಚುತ್ತಿಲ್ಲ ಎಂದು ಗ್ರಾಮಸ್ಥ ಪಾಲಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಎಚ್.ಎಂ.ಹೊಳೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ಟ್ಯ್ರಾನ್ಸ್‍ಫಾರ್ಮರ್ ಸುಟ್ಟು ತಿಂಗಳಾದರೂ ಟಿಸಿ ಒದಗಿಸಿಲ್ಲ.
ಗ್ರಾಮಸ್ಥರು ನೀರಿಗಾಗಿ ಅಕ್ಕಪಕ್ಕದ ಹೊಲಗಳಿಂದ ಸೈಕಲ್ ಮೂಲಕ, ಟ್ರ್ಯಾಕ್ಟರ್ ಮೂಲಕ ನೀರು ತಂದು ಜೀವನ ಮಾಡುತ್ತಿದ್ದರೂ ಅಧಿಕಾರಿಗಳು ಬೆಸ್ಕಾಂ ಎಇಇ, ಎಸ್‍ಒಗಳ ಕಣ್ಣು ಕಾಣಿಸುತ್ತಿಲ್ಲ. ಕಿವಿ ಕೇಳದಂತೆ ಇದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತರಾದ ಬಿದರಕೆರೆ ಗ್ರಾಮದ ರೈತರಾದ ಪ್ರಕಾಶ್, ಉಜ್ಜನಗೌಡ, ಸಿದ್ದವೀರಪ್ಪ, ಉಮಾಪತಿ, ಮಠದ ದ್ಯಾಮೇನಹಳ್ಳಿ, ತಿಪ್ಪೇರುದ್ರೇಶ್, ಮುಸ್ಟೂರು ಗ್ರಾಮದ ವೆಂಕಟೇಶ್ ಸೇರಿದಂತೆ ಬಿಳಿಚೋಡು, ಕಸಬಾ, ಸೋಕ್ಕೆ ಓಬಳಿಯ ನೂರಾರು ರೈತರು ಬೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು.
ಟ್ರ್ಯಾನ್ಸ್ ಫಾರ್ಮರ್ ಗಳು ಲಭ್ಯವಾಗುತ್ತಿಲ್ಲ:
ಮಳೆ ಹೆಚ್ಚಾಗಿದ್ದು ವಿದ್ಯುತ್‍ಗೆ ಬೇಡಿಕೆ ಹೆಚ್ಚಾಗಿದೆ.ಟ್ರ್ಯಾನ್ಸ್ ಫಾರ್ಮರ್ ಗಳು ಲಭ್ಯವಾಗುತ್ತಿಲ್ಲ. ಬೆಂಗಳೂರು ಬೆಸ್ಕಾಂ ಮುಖ್ಯ ಕಚೇರಿಗೆ ಹೆಚ್ಚು ಟಿಸಿಗಳನ್ನು ಕೊಡಿ ಎಂದು ಮನವಿ ಮಾಡಿದ್ದೇನೆ. ಶೀಘ್ರವೇ ತರಿಸುವ ವ್ಯವಸ್ಥೆ ಮಾಡುತ್ತೇವೆ.
-ಎಸ್.ವಿ.ರಾಮಚಂದ್ರ, ಜಗಳೂರು ಶಾಸಕ.
ಬೇಗ ಸಮಸ್ಯೆ ಬಗೆ ಹರಿಸುತ್ತೇವೆ
ಬೇಸಿಗೆ ಆರಂಭವಾಗಿದ್ದು ವಿದ್ಯುತ್‍ಗೂ ಬೇಡಿಕೆ ಹೆಚ್ಚಿದೆ. ಟ್ರ್ಯಾನ್ಸ್‍ಫಾರ್ಮರ್‍ಗಳ ತಾಂತ್ರಿಕ ಸಮಸ್ಯೆಯಿಂದ ಸುಟ್ಟು ಹೋಗುತ್ತಿವೆ. ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುತ್ತೇವೆ.
-ಗಿರೀಶ್ ನಾಯ್ಕ್, ಎಇಇ ಬೆಸ್ಕಾಂ ಜಗಳೂರು