ಸುದ್ದಿವಿಜಯ, ಜಗಳೂರು:ದ್ವಿದಳ ಧಾನ್ಯಗಳಿಗೆ ತಾಲೂಕಿನಲ್ಲಿ ಪೂರಕವಾದ ವಾತಾವರಣವಿದ್ದು ಕಡಲೆ ಸೇರಿದಂತೆ ಯಾವುದೇ ಬೆಳೆ ಬೆಳೆಯಬೇಕಾದರೆ ಮೊದಲು ಬೀಜೋಪಚಾರ ಮಾಡಿದರೆ ಗುಣಮಟ್ಟದ ಇಳುವರಿ ನಿರೀಕ್ಷಿಸಬಹುದು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದದಲ್ಲಿ ಬಿದರಕೆರೆ ಅಮೃತ ತರಳಬಾಳು ಕಂಪನಿ ಹಾಗೂ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪ್ರಧಾನ ರೈತ ತರಬೇತಿ ಕಾರ್ಯಕ್ರಮ ಮೂಲಕ 50 ಜನ ಎಫ್‍ಪಿಒ ಸದಸ್ಯ ರೈತರಿಗೆ ಉಚಿತವಾಗಿ 25 ಕೆಜಿಯ ಬಿತ್ತನೆ ಕಡಲೆ ಬೀಜಗಳ ಪ್ಯಾಕೇಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿಯೇ ಅತ್ಯಂತ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಜಗಳೂರು ತಾಲೂಕು ಖ್ಯಾತಿಯಾಗಿದೆ. ದ್ವಿದಳ ಧಾನ್ಯಗಳ ಉತ್ಪಾದನೆ, ಎಣ್ಣೆಕಾಳು ಉತ್ಪಾದನೆ ಸೇರಿದಂತೆ ಎಲ್ಲ ಬಗೆಯ ಬೆಳೆಗಳನ್ನು ಈ ಭಾಗದ ನೆಲದಲ್ಲಿ ಬೆಳೆಯಲು ಪೂರಕವಾದ ವಾತಾವರಣವಿದೆ.
ಕಡಲೆಯ ನವೀನ ತಳಿಗಳಾದ ಜಾಕಿ-9218 ಮತ್ತು ಜೆಜಿ 11 ಹಾಗೂ ಜೆಜಿ 14 ತಳಿಯ ಕಡಲೆ ಬೀಜಗಳನ್ನು ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಟ್ರೈಕೊಡರ್ಮ ನಾಲ್ಕು ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಲೇಪನ ಮಾಡಬೇಕು. ನಂತರ ಜೈವಿಕ ಗೊಬ್ಬರಗಳಾದ ರೈಬೋಜಿಯಂ ಹಾಗೂ ರಂಜಕ ಗೊಬ್ಬರವನ್ನು ಎಕರೆಗೆ 1 ಚೀಲ ಹಾಕಬೇಕು. ಒಂದು ಎಕರೆಗೆ 25 ಕೆಜಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಬೀರಪ್ಪ ಮಾತನಾಡಿ, ರೈತರು ಇ-ಕೆವೈಸಿ ಮಾಡಿಸಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಬರುವ ಕಿಸಾನ್ ಸಮ್ಮಾನ್ ನಿಧಿ ಪಡೆಯಿರಿ ಎಂದು ಸಲಹೆ ನೀಡಿದರು.
ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಕೂಬಾ ನಾಯ್ಕ ಮಾತನಾಡಿ, ಎಫ್‍ಪಿಗಳಿಂದ ರೈತರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆರ್ಥಿಕ ನೆರವು ನೀಡುತ್ತಿದ್ದು ರೈತರು ಮಧ್ಯವರ್ತಿಗಳ ಕಾಟದಿಂದ ಮುಕ್ತವಾಗಲು ಎಫ್‍ಪಿಒಗಳಲ್ಲಿಯೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಫ್‍ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ಉಪಾಧ್ಯಕ್ಷರಾದ ಎಸ್.ಎಂ.ಸೋಮನಗೌಡ ಕಂಪನಿಯ ನಿರ್ದೇಶಕರಾದ ಕಲ್ಲೇದೇವರಪುರ ಕೃಷ್ಣಮೂರ್ತಿ, ಅರಿಶಿಣಗುಂಡಿ ನಾಗರಾಜ್, ರಸ್ತೆಮಾಕುಂಟೆ ಕವಿತಾ ಸ್ವಾಮಿ, ಗುತ್ತಿದುರ್ಗ ಗ್ರಾಮದ ಬಸವನಗೌಡ. ಸಸ್ಯ ಸಂರಕ್ಷಣಾ ವಿಜ್ಞಾನಿ ಅವಿನಾಶ್, ಕಂಪನಿ ಸಿಇಒ ಮನೋಜ್‍ಕುಮಾರ್, ಪವನ್ ಪಾಟೀಲ್, ಗ್ರಾಪಂ ಸದ್ಯರಾದ ಭಾರತಿ ಮಂಜುನಾಥ್, ಈರಣ್ಣ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.