ಸುದ್ದಿವಿಜಯ, ಜಗಳೂರು: ಬೆಸ್ಕಾಂ ಇಲಾಖೆ ಅಕ್ರಮ-ಸಕ್ರಮ ರದ್ದುಗೊಳಿಸಿ ರೈತರ ಬೆನ್ನಿಗೆ ಬರೆ ಹಾಕಿ ಗುಣಮಟ್ಟದ ವಿದ್ಯುತ್ ನೀಡದೇ ನಿತ್ಯ ಸಾಯುವಂತೆ ಮಾಡಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಗುರುವಾರ ತಹಶೀಲ್ದಾರ್ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಬಿತ್ತನೆ ಮಾಡಿದ ಮುಖ್ಯ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ರಾಗಿ ಸೂರ್ಯಕಾಂತಿ, ಸಜ್ಜೆ, ಜೋಳ, ಈರುಳ್ಳಿ, ನವಣೆ, ತರಕಾರಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದೆ.
ಹೊಸದಾಗಿ ಬೋರ್‍ವೆಲ್ ಕೊರೆಸಿದರೆ ಅಕ್ರಮ ಸಕ್ರಮ ಯೋಜನೆ ಅಡಿ ಇದುವರೆಗೂ ರೈತರಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ರೈತರಿಂದ ವಂತಿಕೆ ಹಣ ಕಟ್ಟಿಸಿಕೊಂಡು ಎರಡು ವರ್ಷಗಳಾದರೂ ಅಕ್ರಮ ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕೊಡದೇ ರೈತರಿಗೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘದ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ, ಬೆಸ್ಕಾಂ ಇಲಾಖೆ ಸ್ಥಗಿತಗೊಳಿಸಿರುವ ಅಕ್ರಮ-ಸಕ್ರಮ ಯೋಜನೆ ಮುಂದುವರೆಸಬೇಕು. ಎಲ್‍ಟಿ ಲೈನ್ ಮತ್ತು ಪವರ್ ಲೈನ್ 500 ಮೀಟರ್ ಒಳಗೆ ಇದ್ದರೆ ಟಿಸಿ ಬದಲಿಗೆ ಸೋಲಾರ್ ಅಳವಡಿಕೆ ನಿಯಮವನ್ನು ಕೈ ಬಿಡಬೇಕು. ಟಿಸಿ ಸುಟ್ಟು 24 ಗಂಟೆಗಳ ಒಳಗೆ ಪರ್ಯಾಯ ಟಿಸಿಯನ್ನು ನೀಡಬೇಕು.
ಪೆಂಡಿಂಗ್ ಇರುವ ಟಿಸಿಗಳನ್ನು ತಕ್ಷಣವೇ ನೀಡಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡುವ ಲೈನ್‍ಮನ್‍ಗಳಿಗೆ ಎಚ್ಚರಿಕೆ ಕೊಡಬೇಕು.
ರಾತ್ರಿ ಸಮಯದಲ್ಲಿ ನೀಡುವ ವಿದ್ಯುತ್ ಸರಬರಾಜನ್ನು ಹಗಲು ನೀಡಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳನ್ನು ತಕ್ಷಣೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕಾನನಕಟ್ಟೆ ತಿಪ್ಪೇಸ್ವಾಮಿ, ದಿಬ್ಬದಹಳ್ಳಿ ಗಂಗಾಧರಪ್ಪ, ಗೌಡಗೊಂಡನಹಳ್ಳಿ ಸತೀಶ್, ಕಸವನಹಳ್ಳಿ ನಾಗರಾಜ್, ರಾಜನಹಟ್ಟಿ ರಾಜು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಬೇಡಿಕೆಗಳನ್ನು ಸಲ್ಲಿಸಿದರು.