ಸುದ್ದಿವಿಜಯ, ಜಗಳೂರು: ಪಕ್ಕದ ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ಸರಕಾರ ನಮ್ಮ ರಾಜ್ಯಕ್ಕಿಂತಲೂ ಕಮಿಷನ್ ಹೆಚ್ಚು ನೀಡುತ್ತಿದೆ. ಕನಿಷ್ಠ ಕಮಿಷನ್ ನೀಡುತ್ತಿರುವ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ. ಹೀಗಾಗಿ ಪಡಿತರ ವಿತರಕರಿಗೆ ಕ್ವಿಂಟಾಲ್‍ಗೆ ಕಮಿಷನ್ 350 ರೂ. ಹೆಚ್ಚಿಸಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನ್ಯಾಯಬೆಲೆ ಅಂಗಡಿ ಮಾಲೀಕರ ತಾಲೂಕು ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿದೆ. ನಮ್ಮ ಸರ್ವರ್‍ನಲ್ಲಿ 21 ಇಲಾಖೆಗಳುನಮ್ಮ ದತ್ತಾಂಶ ಬಳಸಿಕೊಳ್ಳುತ್ತಿವೆ. ಹೀಗಾಗಿ ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅದರಿಂದ ಜನರು ಪಡಿತರ ಪಡೆಯಲು ಸಮಸ್ಯೆಯಾಗಿ ಹಿಡಿ ಶಾಪ ಹಾಕುತ್ತಿದ್ದಾರೆ.
ಇದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಆದರೆ ನ್ಯಾಯವಾಗಿ ಕೆಲಸ ಮಾಡುವ ವಿತರಕರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಕಮಿಷನ್ ಹೆಚ್ಚಿಸುವ ವಿಚಾರದಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿ ಸರಕಾರ ಗಮನಕ್ಕೆ ತಂದಿದೇವೆ. ಈ ಹಿಂದೆ ಕಾರ್ಡುದಾರರಿಗೆ ಅಕ್ಕಿ ಸೇರಿ ಉಪ್ಪು, ಸಕ್ಕರೆ, ಎಣ್ಣೆ ಸೇರಿದಂತೆ ಎಲ್ಲ ಪದಾರ್ಥಗಳನ್ನು ನೀಡಲಾಗುತ್ತಿತ್ತು.
ಈಗಲೂ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಎಲ್ಲ ಪದಾರ್ಥಗಳನ್ನು ನೀಡಲಾಗುತ್ತಿದೆ. ಫೆ.1ರಿಂದ ಕಾರ್ಡ್‍ದಾರರಿಗೆ 7 ಕೆಜಿ ಅಕ್ಕಿ ಕೊಡಲು ಸರಕಾರ ತೀರ್ಮಾನಿಸಿದೆ ಅದು ಸ್ವಾಗತಾರ್ಹ.
ಬಯೋ ಮೆಟ್ರಿಕ್ ಮೂಲಕ ಅಕ್ಕಿಕೊಡಿಸುವ ವಿಧಾನ ಎಲ್ಲಿಯೂ ಲೋಪವಾಗಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಒಬ್ಬರೇ ಒಬ್ಬ ಶಾಸಕರು ಸದನದಲ್ಲಿ ಚರ್ಚೆಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
5 ಸಾವಿರ ಕೋಟಿ ಬಜೆಟ್‍ನಲ್ಲಿ ಮೀಸಲಿಡಿ:
ನಮ್ಮ ರಾಜ್ಯದಲ್ಲಿ 2.17 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ರಾಜ್ಯದ 4.60 ಲಕ್ಷ ಕಾರ್ಡುದಾರರಿಗೆ ವಿಚರಣೆ ಮಾಡುತ್ತೇವೆ. ಕೇಂದ್ರ ಸರಕಾರ ಅಕ್ಕಿಗೆ 2, ಗೋಧಿಗೆ 3 ರೂ ಕೊಡುತ್ತಿತ್ತು.
ಆದರೆ ಈಗ ಅದು ಕೊಡುತ್ತಿಲ್ಲ. ಸಿದ್ದರಾಮಯ್ಯ, ಬಿಎಸ್‍ವೈ ಸರಕಾರದಲ್ಲಿ ಅಕ್ಕಿ ರಾಗಿ, ಬೇಳೆ ಎಲ್ಲ ಪದಾರ್ಥಗಳನ್ನು ಜನರಿಗೆ ನೀಡಲಾಗುತ್ತಿತ್ತು. ಪ್ರಸ್ತುತ ಏಕೆ ಸಾಧ್ಯವಾಗುತ್ತಿಲ್ಲ. ಕೋವಿಡ್ ವೇಳೆ ಆಹಾರ ಪದಾರ್ಥ ವಿತರಣೆ 15 ಸಾವಿರ ಕೋಟಿ ಲೆಕ್ಕ ತೋರಿಸಿತ್ತು. 2.300 ಕೋಟಿ ರೂನಲ್ಲಿ ನಾವು ವರ್ಷಕ್ಕೆ 4.60 ಲಕ್ಷ ಕಾರ್ಡುದಾರಿಗೆ ಆಹಾರ ಪದಾರ್ಥ ನೀಡುತ್ತಿದ್ದೇವೆ.
ಕೋವಿಡ್ ಸಮಯದಲ್ಲಿ ಎಷ್ಟೊಂದು ಅವ್ಯವಹರಾವಾಗಿರಬಹುದು ಎಂದು ಪ್ರಶ್ನೆ ಮಾಡಮಾಡಿದರು. ನಾವು ಜನರಿಗೆ ಅನ್ನ ವಿತರಣೆ ಮಾಡುತ್ತಿದ್ದೇವೆ ಎಂಬ ತೃಪ್ತಿಯಿದೆ. ಲಕ್ಷ ಲಕ್ಷ ಟನ್ ಸಕ್ಕರೆ ರಾಜ್ಯದಲ್ಲಿ ಕೊಳೆಯುತ್ತಿದೆ ಅದನ್ನು ಜನರಿಗೆ ಹಂಚಿದರೆ ಏನು ಸಮಸ್ಯೆಯಾಗುತ್ತದೆ.
ನಮ್ಮ ಆಹಾರ ಇಲಾಖೆಗೆ 5 ಸಾವಿರ ಕೋಟಿ ರೂಗಳನ್ನು ಬಜೆಟ್‍ನಲ್ಲಿ ಮೀಸಲಿಡಿ ಎಲ್ಲ ಪದಾರ್ಥಗಳನ್ನು ನಾವು ಜನರಿಗೆ ಹಂಚುತ್ತೇವೆ. ಪಕ್ಕದ ರಾಜ್ಯದಲ್ಲಿ ಕೊಡುವಂತೆ 350 ರೂಗಳನ್ನು ಪ್ರತಿಕ್ವಿಂಟಲ್‍ಗೆ ಕೊಡಿ ಎಂದು ಆಗ್ರಹಿಸಿದರು.
ಈ ವೇಳೆ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಬಿ.ರಸೂಲ್, ಗೌರವಾಧ್ಯಕ್ಷ ತೋರಣಗಟ್ಟೆ ರುದ್ರಮುನಿ, ಉಪಾಧ್ಯಕ್ಷ ಗೌಡಗೊಂಡನಹಳ್ಳಿ ಆರ್.ಬಿ. ಬಸವರಾಜ್, ಬಿ.ವಿ.ಬಸವರಾಜ್ ಸತ್ಯಪ್ಪ ನಾಯಕ, ಯಲ್ಲಪ್ಪ, ಕಾಟಪ್ಪ, ನಿಜಲಿಂಗಪ್ಪ, ಉಮೇಶ್, ಸಿದ್ದಪ್ಪ, ರವೀಂದ್ರರೆಡ್ಡಿ, ಭೀಮಶೆಟ್ಟಿ, ಅಡಿವೆಪ್ಪ, ನಾಗರಾಜ್,ಚಂದ್ರಪ್ಪ, ವಿಜಯಕುಮಾರ್ ಸೇರಿದಂತೆ 50ಕ್ಕೂ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.