ಸುದ್ದಿವಿಜಯ,ಜಗಳೂರು: ಬಿಸಿ ಬಿಸಿ ಮಂಡಕ್ಕಿ ಮೆಣಸಿನ ಕಾಯಿ, ಎಗ್‍ರೈಸ್, ಫ್ರೈಡ್ ರೈಸ್, ಬೆಣ್ಣೆದೋಸೆ, ಮಸಾಲ ದೋಸೆ, ಗೋಲಗೊಪ್ಪ, ಗೋಬಿ ಮಂಚೂರಿ, ಪಲಾವ್, ಐಸ್‍ಕ್ರೀಂ, ಪಾನಿಪೂರಿ, ಮಸಾಲಾ ಪೂರಿ, ಜಾಮೂನು, ಪಾಯಸ, ಆಮ್ಲೆಟ್, ಲಾಡು ಹೀಗೆ ತರಹೇವಾರಿ ಆಹಾರದ ಮೇಳ ನಡೆದಿದ್ದು ಪಟ್ಟಣದ ಜೆ.ಎಂ.ಇಮಾಂ ಮೆಮೋರಿಯಲ್ ಶಾಲೆಯಲ್ಲಿ.
ಶುಕ್ರವಾರ ಜೆ.ಎಂ. ಇಮಾಂ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಗೋಸ್ಕರ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು.
ವ್ಯವಹಾರ ಜ್ಞಾನದ ಜೊತೆಗೆ ಭಾರತೀಯ ಅಡುಗೆ ವಿಶೇಷಗಳನ್ನು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಮಕ್ಕಳೇ ಬಾಣಸಿಗರಾಗಿ ಆಹಾರ ಪದಾರ್ಥಗಳನ್ನು ತಯಾರಿಸಿ ಕಡಿಮೆ ಬೆಲೆಗೆ ಮಕ್ಕಳಿಗೆ ಮಾರಾಟ ಮಾಡಿ ಆರ್ಥಿಕ ಲಾಭ ಹೇಗೆ ಗಳಿಸಬಹುದು ಎಂಬ ಉದ್ದೇಶದಿಂದ ಶಾಲಾ ಆಡಳಿತ ಮಂಡಳಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಶಾಲಾ ಆವರಣದಲ್ಲಿ ಇಡೀ ದಿನ ಮಕ್ಕಳು ತಾವು ಸ್ಥಳದಲ್ಲೇ ವಿಶೇಷ ಖಾದ್ಯಗಳ ಆಹಾರ ತಯಾರಿ ತಾಜಾ ತಿಂಡಿಗಳ ಮಾರಾಟ ಮಾಡಿದರು. ಪೋಷಕರು ಸಹ ಮಕ್ಕಳ ಆಹಾರ ತಯಾರಿಕೆಗೆ ಸಾಥ್ ನೀಡಿದ್ದರು. ಸ್ಟಾಲ್‍ನಲ್ಲಿ ತಮ್ಮ ಮಕ್ಕಳು ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ಹೋಟೆಲ್ ಉದ್ಯಮದಿಂದ ಹೇಗೆ ಆರ್ಥಿಕ ಲಾಭ ಗಳಿಸಬಹುದು ಎಂದು ತಿಳಿಸಿ ಕೊಟ್ಟರು.
ಬಾಣಸಿಗರಾದ ಶಿಕ್ಷಕರು: ಮಕ್ಕಳು ವಿಶೇಷ ಖಾದ್ಯಗಳನ್ನು ತಯಾರಿಸಲು ಶಿಕ್ಷಕರು ಸಹಭಾಗಿತ್ವ ಎದ್ದು ಕಾಣುತ್ತಿತ್ತು. ಮಕ್ಕಳು ಮಾರಾಟ ಮಾಡುವ ಆಹಾರ ಪದಾರ್ಥಗಳಿಗೆ ಆರ್ಥಿಕ ವ್ಯವಹಾರ ಮತ್ತು ಅಡುಗೆ ಪದಾರ್ಥಗಳನ್ನು ಹೇಗೆ ತಯಾರಿಸಬೇಕು ಎಂಬುದರ ಬಗ್ಗೆ ಮುಖ್ಯ ಶಿಕ್ಷಕರಾದ ಜೆ.ಆರ್.ಶಂಕರ್, ಎಸ್.ಎಂ ವಿಜಯ ಲಕ್ಷ್ಮೀ, ಸಹ ಶಿಕ್ಷಕರಾದ ಬಿ.ಟಿ.ನಾಗರಾಜ್, ಅಬ್ದುಲ್ ರೆಹಮಾನ್, ಹಸೀನಾ ಬೇಗಂ, ಸೌಮ್ಯಾ, ಸುಸ್ಮಾ, ನಂದಿನಿ, ರೂಪಾ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಮನೋವಿಕಾಸಕ್ಕೆ ಭೂಮಿಕೆ
ಜೆ.ಎಂ.ಇಮಾಂ ಶಾಲಾ ಆಡಳಿತ ಮಂಡಳಿ ಮಕ್ಕಳ ಮನೋವಿಕಾಸ ಮತ್ತು ಕ್ರಿಯಾತ್ಮಕ ದೃಷ್ಟಿಕೋನಗಳನ್ನು ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಮಕ್ಕಳ ಸಂತೆ ಹಾಗೂ ಚಿತ್ರಕಲಾ ಸಂತೆ ಅಲ್ಲದೇ ಆಹಾರ ಮೇಳವನ್ನು ಆಯೋಜಿಸುತ್ತಾ ಬಂದಿದೆ. ಕೊಠಡಿಯಲ್ಲಿ ಬೋಧಿಸುವ ಪಾಠದ ಜೊತೆಗೆ ಮಕ್ಕಳಿಗೆ ಆರ್ಥಿಕ ವ್ಯವಹಾರವೂ ಮಕ್ಕಳ ಬೌದ್ಧಿಕತೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶ ಇದಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಹುಸೇನ್ ತಿಳಿಸಿದರು.