ಸುದ್ದಿವಿಜಯ, ಜಗಳೂರು: ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ವೇ ನಂ 17ರಲ್ಲಿ ಸರಕಾರದ ಗೋಮಾಳ ಜಾಗವಿದೆ. ಈ ಜಾಗವನ್ನು ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ತುಂಬ ಅನ್ಯಾಯವಾಗುತ್ತದೆ.
ಕಳೆದ ಹತ್ತಾರು ವರ್ಷಗಳಿಂದಲೂ ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಡೆಸಲಾಗುತ್ತಿದೆ. ಸ್ವತಃ ನಿವೇಶನವಿಲ್ಲದೇ ಬೀದಿಗಳಲ್ಲಿ ವಾಸ ಮಾಡುವಂತಾಗಿದೆ. ಆದರೆ ಗ್ರಾಮ ಪಂಚಾಯಿತಿ ಆಡಳಿತ ಸರಕಾರದ ಜಾಗದಲ್ಲಿ ನಿವೇಶನ ನೀಡಿ ಸೂರ ಕಲ್ಪಿಸುವ ಬದಲಾಗಿದೆ ಪವರ್ ಸ್ಟೇಷನ್‍ಗೆ ಅವಕಾಶ ನೀಡಿರುವುದನ್ನ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಬಡವರಿಗೆ ನಿವೇಶನ ನೀಡುವವರಿಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ, ಸರಕಾರಿ ಗೋಮಾಳ ಜಾಗವನ್ನು ನಮ್ಮ ಗ್ರಾಮಕ್ಕೆ ಮೀಸಲಿಡಬೇಕು, ಮನೆ ಇಲ್ಲದವರು, ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು. ಈ ಹಿಂದೆ ನಿವೇಶನ ನೀಡುವಂತೆ ಅನೇಕ ಬಾರಿ ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಉತ್ತರ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಚುನಾಯಿತರು ತುಂಬ ನಿರ್ಲಕ್ಷ ತೋರಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.
ತಹಸೀಲ್ದಾರ್‍ಗೆ ಮನವಿ:
ಗ್ರಾಮ ಪಂಚಾಯಿತಿಯಿಂದ ಜಗಳೂರಿನ ತಾಲೂಕು ಕಚೇರಿಗೆ ಆಗಮಿಸಿದ ಮಹಿಳೆಯರು ತಹಸೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ನಾವು ತುಂಬ ಬಡವರಿದ್ದೇವೆ, ಹಣಕೊಟ್ಟು ನಿವೇಶನ ಖರೀದಿಸುವಷ್ಟು ಹಣವಂತರಲ್ಲಾ, ಕೂಲಿ ಮಾಡಿ ಜೀವ ನಡೆಸಬೇಕು, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಜೀವನ ತುಂಬ ಕಷ್ಟವಾಗುತ್ತದೆ. ಗ್ರಾಪಂ ಗೋಮಾಳ ಜಾಗದಲ್ಲಿ ನಿವೇಶನ ಕೊಡಿಸಿ ಸೂರು ನೀಡಿದರೆ ನಿಮಗೆ ಪುಣ್ಯ ಬರುತ್ತದೆ ಎಂದು ಮಹಿಳೆಯರು ಅಳಲೊತ್ತುಕೊಂಡರು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಸಂತೋಷ್‍ಕುಮಾರ್, ಯಾವುದೇ ಆತಂಕ ಬೇಡ ಗ್ರಾಮದ ಗೋಮಾಳ ಜಾಗವನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಅಲ್ಲಿಯರೆವಗೂ ಸಮಾಧಾನದಿಂದ ಇರುವಂತೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಚ್. ಮಾರುತಿ, ಮಂಜುಳಾ, ನಾಗರತ್ನ, ಹನುಮಂತ, ಅಲ್ಲಾಭಕ್ಷಿ, ಸುಧಾ, ಜಾಕೀರಾಬಿ, ಬಿ.ಎಸ್ ತಿಪ್ಪೇಸ್ವಾಮಿ, ಮುಬೀನಾ ಸೇರಿದಂತೆ ಮತ್ತಿತರಿದ್ದರು.