ಸುದ್ದಿವಿಜಯ,ಜಗಳೂರು: ತಾಲೂಕಿನ ದೊಣೆಹಳ್ಳಿ ಮತ್ತು ಹೊಸಹಟ್ಟಿ ಮಾರ್ಗದಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಎರಡು ಬೈಕ್‍ಗಳ ಮಧ್ಯೆ ಅಪಘಾತವಾಗಿದ್ದು ದೊಣೆಹಳ್ಳಿ ಗ್ರಾಮದ ರಾಮಪ್ಪ (46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಅಪಘಾತ ನಡೆದ ಕೇವಲ ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಘಟನೆಯ ವಿವರ: ಮೆಕ್ಕೆಜೋಳ ಮಷೀನ್ ಹೊಂದಿದ್ದ ರಾಮಪ್ಪ ಕಾರ್ಮಿಕರನ್ನು ಕರೆಯಲು ದೊಣೆಹಳ್ಳಿಯಿಂದ ಹೊಸಹಟ್ಟಿಗೆ ಹೋಗಿ ಬರುವಾಗ ದೊಣೆಹಳ್ಳಿ ಮಾರ್ಗವಾಗಿ ಒಂದೇ ಬೈಕ್‍ನಲ್ಲಿ ತ್ರಿಬಲ್ ರೈಡ್‍ನಲ್ಲಿ ಬರುತ್ತಿದ್ದ ಹೊಸಹಟ್ಟಿ ಗ್ರಾಮದ ಮೊರಾರ್ಜಿ ಶಾಲೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ರಾಮಪ್ಪನ ಬೈಕ್‍ಗೆ ಗುದ್ದಿ ಪರಾರಿಯಾಗಿದ್ದಾರೆ.
ಆರೋಪಿಗಳ ಸುಳಿವು ನೀಡಿತು ಸಿಮೆಂಟ್ ಮೆತ್ತಿದ ಚಪ್ಪಲಿ:
ಹಿಟ್ ಅಂಡ್ ರನ್ ಮಾಡಿ ಪರಾರಿಯಾಗಿರುವ ಆರೋಪಿಗಳು ರಾಮಪ್ಪನ ಬೈಕ್‍ಗೆ ಗುದ್ದಿ ಪರಾರಿಯಾಗುವಾಗ ಸಿಮೆಂಟ್ ಮೆತ್ತಿದ ಚಪ್ಪಲಿ ಮತ್ತು ಅಂಗಡಿಯಿಂದ ಖರೀದಿಸಿ ತಂದಿದ್ದ ಮೊಟ್ಟೆಗಳು ಅಪಘಾತ ನಡೆದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತನಿಖೆಯ ಜಾಡು ಹಿಡಿದ ಜಗಳೂರು ಪಟ್ಟಣದ ಪಿಎಸ್‍ಐ ಮಹೇಶ್ ಹೊಸಪೇಟ ಸ್ಥಳೀಯರನ್ನು ವಿಚಾರಿಸಿದಾಗ ನೂತನ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು ಅದರಲ್ಲಿ ಕೆಲಸ ಮಾಡುವ ಕಾರ್ಮಿಕರೇ ಇರಬಹುದು ಎಂಬ ಅನುಮಾನ ವ್ಯಕ್ತಿಪಡಿಸಿದರು.
ತಕ್ಷಣ ನಿರ್ಮಾಣ ಹಂತದ ವಸತಿ ಶಾಲೆಗೆ ಹೋದಾಗ ಆರೋಪಿಗಳು ತಂಗಿರುವ ಕೊಠಡಿಯಲ್ಲಿ ರಕ್ತದ ಕಲೆಗಳು ಇರುವ ಬಟ್ಟೆಗಳು ಕಂಡು ಬಂದವು. ಆರೋಪಿಗಳು ಉಡುಪಿ ಮತ್ತು ಚಿಕ್ಕಮಗಳೂರು ಮೂಲದವರು ಎಂದು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಒಬ್ಬ ಆರೋಪಿಯ ಹೆಸರು ಅಂಬರೀಷ್ ಎಂದು ತಿಳಿದು ಬಂದಿದೆ. ಮತ್ತಿಬ್ಬರು ಆರೋಪಿಗಳ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಎಸ್‍ಐ ಮೂರ್ತಿ, ಆನಂದ್, ನಾಗರಾಜ್, ಮಾರಪ್ಪ, ಮುಖ್ಯಪೇದೆ ಮಾಲತೇಶ್ ಇದ್ದರು. ಈ ಅಪಘಾತ ಸಂಬಂಧ ಜಗಳೂರು ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪಿಎಸ್‍ಐ ಮಹೇಶ್ ಹೊಸಪೇಟ್ ತಂಡಗಳನ್ನು ರಚಿಸಿ ಬಂಧಿಸಲು ಬಲೆ ಬೀಸಿದ್ದಾರೆ.