ಸುದ್ದಿವಿಜಯ, ಜಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೆಆರ್‍ಸಿಎಲ್-3 ಸೂಸೈಟಿ ಫಾರ್ ಪೀಪಲ್ಸ್ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಇವರ ಸಹಾಯೋಗದಲ್ಲಿ ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಜಲಜೀವನ್ ಮಿಷನ್ ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಡೆಯಿತು.
ತಾಲೂಕಿನ 22 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಪಿಡಿಒ, ಕಾರ್ಯದರ್ಶಿಗಳಿಗೆ ಜಲಜೀವನ್ ಮಿಷನ್ ಯೋಜನೆ ಮಹತ್ವದ ಕುರಿತು ತರಬೇತಿ ನೀಡಿದರು.
ಜಿಪಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್ ಮಾತನಾಡಿ, ಇಂದಿಗೂ ದೇಶದ ಹಲವು ಭಾಗಗಳಲ್ಲಿ ಪ್ರತಿ ಹನಿ ನೀರಿಗಾಗಿ ಹಾತೊರೆಯಬೇಕಿದೆ. ಮಹಿಳೆಯರು ನೀರಿಗಾಗಿ ಮೈಲುಗಟ್ಟಲೆ ನಡೆಯಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದು ಜಲ ಜೀವನ್ ಮಿಷನ್‍ನ ಗುರಿಯಾಗಿದೆ ಎಂದರು.
ಭೂಮಿ ಜೀವಾಂಕುರವಾಗಲು ನೀರೇ ಮೂಲಾಧಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಗಾಳಿ, ನೀರು, ಬೆಳಕು ಸಕಲ ಜೀವರಾಶಿಗೂ ಅತ್ಯಗತ್ಯ. ಭಾರತ ಭೌಗೋಳಿಕವಾಗಿ ವೈವಿಧ್ಯತೆಯಿಂದ ಕೂಡಿದೆ.
ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ, ಕೆಲವೆಡೆ ಸಾವಿರ ಅಡಿಗಳಷ್ಟು ಬೋರ್‍ವೆಲ್ ಕೊರೆದರೂ ನೀರಿನ ಸೆಲೆ ಕಾಣದು. ಹೀಗಾಗಿ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ.
ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ‘ಜಲ ಜೀವನ್ ಮಿಷನ್’ ಆರಂಭಿಸಿದರು.
ಈ ಯೋಜನೆಯನ್ನು ಜಲ ಶಕ್ತಿ ಇಲಾಖೆ ಅನುಷ್ಠಾನ ಮಾಡುತ್ತಿದೆ. 2021ರ ಅಕ್ಟೋಬರ್ ವೇಳೆಗೆ ದೇಶದ ವಿವಿಧ ರಾಜ್ಯಗಳಲ್ಲಿ 5.20 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನೀರಿನ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯ:
ಕಲುಷಿತ ನೀರಿನ ಸೇವನೆಯಿಂದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಗಳನ್ನು ಆರೋಗ್ಯದ ಅಪಾಯಗಳಿಗೆ ಒಡ್ಡುತ್ತದೆ. ಆದ್ದರಿಂದ ಪ್ರಾಕೃತಿಕವಾಗಿ ಹಾಗೂ ಮಾನವ ಜನ್ಯದಿಂ ಕಲುಷಿತವಾಗಿರುವ ನೀರನ್ನು ಕುಡಿಯುವ ವ್ಯಕ್ತಿಗಳ ಆರೋಗ್ಯವನ್ನು ನಿರ್ಧರಿಸುವಲ್ಲಿ ತನ್ನದೇ ಆದ ದೊಡ್ಡ ಪ್ರಭಾವ ಬೀರುತ್ತದೆ. ಹೀಗಾಗಿ ಸಾರ್ವಜನಿಕರು ರೋಗವನ್ನು ತಡೆಗಟ್ಟಲು ಸಂಘಟಿತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ತಾ.ಪಂ ಇಒ ಚಂದ್ರಶೇಖರ್ ಮಾತನಾಡಿ, ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಸಾಕಷ್ಟು ಎದುರಿಸಿದ್ದಾರೆ. ಇದರಿಂದ ದೂರ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಮಹತ್ವದ ಜಲಜೀವನ್ ಮೀಷನ್ ಯೋಜನೆ ಕಾರ್ಯಕ್ರಮ ಕೊಟ್ಟಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ವಾಸುದೇವ್, ಸಪೋಟಿವ್ ಇಂಜಿನಿಯರ್ ಗಗನ್, ರಂಜಿತ್ ಕುಮಾರ್, ನರೇಗಾ ಸಹಾಯಕ ನಿರ್ದೇಶಕ ವಾಸು, ಪಿಡಿಒ ಶಿವಕುಮಾರ್ ಸೇರಿದಂತೆ ಅನೇಕ ಗ್ರಾಪಂ ಸಿಬ್ಬಂದಿ ಇದ್ದರು.