ಸುದ್ದಿ ವಿಜಯ, ಜಗಳೂರು: ತಾಲೂಕಿನ ಕೆಚ್ಚೇನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸುಲೋಚನಮ್ಮ ಹಾಗೂ ಉಪಾಧ್ಯಕ್ಷರಾಗಿ ಆಶಾ ಖಾತುನ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಕೆಚ್ಚೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 20 ಸದಸ್ಯ ಬಲಾಬಲವಿದ್ದು, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿತ್ತು. ಈ ಹಿಂದೆ ಅಧ್ಯಕ್ಷೆಯಾಗಿದ್ದ ನಾಗಮ್ಮ, ಉಪಾಧ್ಯಕ್ಷ ನರೇಂದ್ರ ಇವರು ಒಡಂಬಡಿಕೆಯಂತೆ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮ ಸಲ್ಲಿಸಲಾಗಿತ್ತು. ಬೇರೆ ಯಾವ ಸದಸ್ಯರು ನಾಮ ಪತ್ರ ಸಲ್ಲಿಸಲಿಲ್ಲ, ಹೀಗಾಗಿ ಚುನಾವಣಾಕಾರಿಯಾಗಿದ್ದ ಪಶು ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ಸುಲೋಚನಮ್ಮ, ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮೂಲಕ ಸೌಕರ್ಯಕ್ಕೆ ಒತ್ತು ನೀಡಲು ಶ್ರಮಿಸುತ್ತೇನೆ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸಣ್ಣಓಬಯ್ಯ, ನರೇಂದ್ರ, ಶಿವಕುಮಾರ್, ಓಬಬಳೇಶ್, ಓ. ಮಂಜಣ್ಣ, ಕೆ.ಸಿ ಓಬಳೇಶ್, ರೇವಣ್ಣ, ಸುಷ್ಮಾಸ್ವರಾಜ್,ಬೊಮ್ಮಕ್ಕ, ರತ್ನಕ್ಕ, ಲಕ್ಷ್ಮೀದೇವಿ, ಹನುಮಂತಪ್ಪ, ಮುಖಂಡರಾದ ಅಹಮದ್ ಅಲಿ, ಜಕಾವುಲ್ಲಾ, ಬಂಗಾರಪ್ಪ, ಬಸವರಾಜ್, ಮಾರಪ್ಪ, ಪಂಡಿತ ಬಸಣ್ಣ, ಪಿಡಿಒ ಮರುಳಸಿದ್ದಪ್ಪ ಇದ್ದರು.