ಸುದ್ದಿವಿಜಯ, ಜಗಳೂರು: ಬಯಲು ಸೀಮೆ ಜಗಳೂರು ತಾಲೂಕಿನಲ್ಲಿ ಶೇಂಗಾ ಬೆಳೆಗೆ ಉತ್ತಮ ವಾತಾವರಣವಿದ್ದು ರೈತರು ತಾಂತ್ರಿಕ ಮತ್ತು ವೈಜ್ಞಾನಿಕ ಹಾಗೂ ಔಷದೋಪಾಚರದ ವಿಧಾನ ಅಳವಡಿಸಿಕೊಂಡರೆ ಅಧಿಕ ಇಳುವರಿ ಪಡೆಯಬಹುದು ಎಂದು ದಾವಣಗೆರೆ ಕೆವಿಕೆ ಬೇಸಾಯ ತಜ್ಞ ಡಾ.ಬಿ.ಓ.ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆ ಕಾಳು ಯೋಜನೆ ಅಡಿಯ ಗುಚ್ಛ ಗ್ರಾಮಗಳ ಮುಂಚೂಣೆ ಪ್ರಾತಕ್ಷ್ಯತೆಯನ್ನು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಜೊತೆ ರೈತರಿಗೆ ಸಲಹೆ ನೀಡಿದರು.
ಅಧಿಕ ಇಳುವರಿಯನ್ನು ಪಡೆಯಲು ಶೇಂಗಾ ದಲ್ಲಿ ಪ್ರತಿ ಎಕರೆಗೆ200 ಕೆಜಿ ಜಿಪ್ಸಂ ಬಳಸಬೇಕು.ಶೇಂಗಾ ಬೆಳೆಯಲ್ಲಿ ಜಿಪ್ಸಂ ಬಳಸುವುದು ಬಹಳ ಸೂಕ್ತ. ಜಿಪ್ಸಂನಲ್ಲಿ ಕ್ಯಾಲ್ಸಿಯಂ ಮತ್ತು ಗಂಧಕ ಇರುವುದರಿಂದ ಕಾಳುಗಳು ಸದೃಢವಾಗಿ ಹಾಗೂ ಎಣ್ಣೆ ಅಂಶ ಹೆಚ್ಚಾಗುತ್ತದೆ ಎಂದು ಬೇಸಾಯ ತಜ್ಞ ಮಲ್ಲಿಕಾರ್ಜುನ ರವರು ರೈತರಿಗೆ ತಿಳಿಸಿಕೊಟ್ಟರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ.ಟಿ.ಎನ್.ದೇವರಾಜ ಮಾರ್ಗದರ್ಶನದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಗ್ರಾಮವನ್ನು ಆಯ್ದುಕೊಳ್ಳಲಾಗಿದೆ. ಶೇಂಗಾ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ರೈತರು ಹಳೆಯ ಪದ್ಧತಿಗಳನ್ನು ಬಿಟ್ಟು ತಾಂತ್ರಿಕ ಸಮೀಕರಣ ಕೃಷಿ ಪದ್ಧತಿಯ ಜೊತೆಗೆ ಕಡಿಮೆ ರಾಸಾಯನಿಕಗಳನ್ನು ಬಳಸಿ ಹೆಚ್ಚು ಬೆಳೆ ಬೆಳೆಯುವ ವಿಧಾನ ಅಳವಡಿಸಿಕೊಳ್ಳಬೇಕು. ದಾವಣಗೆರೆ ಕೆವಿಕೆಯಲ್ಲಿ ರೈತರಿಗೆ ಅನೇಕ ಕಾರ್ಯಾರಾಗಳು ನಡೆಯುತ್ತಿರುತ್ತವೆ. ರೈತರು ಆಗಮಿಸಿ ಮಾಹಿತಿ ಪಡೆದುಕೊಳ್ಳಿ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಸಾಕಷ್ಟು ಯೋಜನೆಗಳು ರೈತರಿಗೆ ವರದಾನವಾಗಲಿವೆ. ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ಕೃಷಿಯನ್ನು ಮಾಡಿದರೆ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.
ಗ್ರಾಮದ ನೂರಾರು ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.