ಸುದ್ದಿವಿಜಯ, ಜಗಳೂರು: ಆಕೆ ಮಾನಸೀಕ ಅಸ್ವಸ್ಥೆ. ದಾರಿ ಕಾಣದೇ ದಾವಣಗೆರೆಯಿಂದ ಜಗಳೂರಿಗೆ ಬಂದಿದ್ದರು. ಊಟವಿರಲ್ಲಿಲ್ಲ. ಭಯಗೊಂಡು ಜನರನ್ನು ನೋಡಿದರೆ ಓಡುತ್ತಿದ್ದಳು. ಅಂತಹ ಯುವತಿಗೆ ಜಗಳೂರು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಸೇರಿ ಅನೇಕ ಅಧಿಕಾರಿಗಳ ನೆರವಿನಿಂದ ಆಕೆ ಪೋಷಕರ ಮಡಿಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಆ ಯುವತಿಯ ಹೆಸರು ರಾಜೇಶ್ವರಿ (25) ದಾವಣಗೆರೆಯ ನಿವಾಸಿ. ಬಡತನದಲ್ಲೇ ಬೆಳೆದ ಅಕೆ ಅವರಿವರ ಮನೆಯಲ್ಲಿ ಕೆಲಸ ಕಾರ್ಯ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಆ ವಿಧಿ ಆಟ ಬೇರೆಯೇ ಆಗಿತ್ತು.
ಬಡತನದಲ್ಲಿ ಬೆಂದಿದ್ದ ಆಕೆಗೆ ಮಾನಸೀಕ ಒತ್ತಡ ಹೆಚ್ಚಾಗಿ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದರು. ಕೆಲ ದಿನಗಳ ಹಿಂದೆ ಆಕೆ ಮನೆ ಬಿಟ್ಟು ಹೊರ ಬಂದಿದ್ದರು. ದಾರಿ ಕಾಣದೇ ಸೀದಾ ಜಗಳೂರು ಪಟ್ಟಣಕ್ಕೆ ಬಂದಿದ್ದರು. ಊಟ ಮಾಡಿರಲಿಲ್ಲ. ನಿದ್ದೆಯಿಲ್ಲದೇ ತೀರಾ ಅಸ್ವಸ್ಥೆಯಾಗಿದ್ದರು. ಜಗಳೂರು ಪಟ್ಟಣದಿಂದ ಮತ್ತೆ ದಾವಣಗೆರೆ ನಗರಕ್ಕೆ ನಡೆದೇ ಹೋಗುತ್ತಿದ್ದರು.
ಮೆದಗಿನಕೆರೆ ಗ್ರಾಮದ ಗೌಡರ ಮಂಜುನಾಥ್, ವೀರಣ್ಣ ಅವರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಮಹೇಶ್ವರಪ್ಪ ಅವರಿಗೆ ಕರೆ ಮಾಡಿ ಆಕೆ ಸ್ಥಿತಿಯನ್ನು ವಿವರಿಸಿದಾಗ ಎಚ್ಚೆತ್ತ ತಾಲೂಕು ಆಡಳಿತ ಕೂಡಲೇ ಮಹೇಶ್ವರಪ್ಪ ಮಾರ್ಗದರ್ಶನದಲ್ಲಿ ಮೆದಗಿನಕೆರೆ ಬಸ್‍ನಿಲ್ದಾಣದಲ್ಲಿ ಭಯಗೊಂಡು ಕುಳಿತಿದ್ದ ಯುವತಿಯನ್ನು ವಿಚಾರಿಸಿದರು.
ಕೂಡಲೇ ಮಹೇಶ್ವರಪ್ಪ ಅವರು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರಿಸಿ ಆಕೆ ಸ್ಥಿತಿಗತಿಯನ್ನು ತಿಳಿದುಕೊಂಡು ಮಹಿಳಾ ಸಾಂತ್ವನ ಕೇಂದ್ರ ಇಲ್ಲವೇ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟು ಬರಲು ಸೂಚನೆ ನೀಡಿದರು.
ಕೌನ್ಸಿಲಿಂಗ್‍ಗೆ ವಿಳಾಸ ಹೇಳಿದ ಯುವತಿ: ಆಹಾರ ಇಲ್ಲದೇ ಸೊರಗಿದ್ದ ಯುವತಿಗೆ ಬ್ರೆಡ್, ಬಾಳೆಹಣ್ಣು, ತಿಂಡಿ, ನೀರಿನ ವ್ಯವಸ್ಥೆ ಮಾಡಿದ ಮಹೇಶ್ವರಪ್ಪ ನಿಧಾನಕ್ಕೆ ಆಕೆಗೆ ಧೈರ್ಯ ತುಂಬಿ ನಿಮ್ಮ ಹೆಸರೇನು ಎಂದು ಮಗುವಿನಂತೆ ಮಾತನಾಡಿಸಿದಾಗ ಆಕೆ ತನ್ನ ಹೆಸರು ರಾಜೇಶ್ವರಿ ಎಂದು ಬಾಯಿಬಿಟ್ಟಳು.
ನಂತರ ಮತ್ತಷ್ಟು ವಿಚಾರಿಸಿದಾಗ ಆಕೆಯ ಮನೆಯಲ್ಲಿ ವಿಳಾಸದ ಬಗ್ಗೆ ಮಾಹಿತಿ ನೀಡಿದಳು. ತಕ್ಷಣವೇ ಕಾರ್ಯಪ್ರೌವೃತ್ತರಾದ ಸಿಡಿಪಿಓ ಬೀರೇಂದ್ರ ಕುಮಾರ್ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರ ನೆರವಿನಿಂದ ಅಂಬುಲೆನ್ಸ್ ನಲ್ಲಿ ಸುರಕ್ಷಿತವಾಗಿ ದಾವಣಗೆರೆ ನಗರದ ಹೊಂಡದ ಸರ್ಕಲ್ ಬಳಿ ಇರುವ ಪೋಷಕರ ಮಡಿಸು ಸೇರಿಸಿ ಬಂದಿರುವುದು ಅಧಿಕಾರಿಗಳ ಮಾನವೀಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹೇಶ್ವರಪ್ಪ ಅವರಿಗೆ ಪೋಷಕರ ಧನ್ಯವಾದ: ಪೋಷಕರ ಮಡಿಲು ಸೇರಿದ ನಂತರ ಪೋಷಕರು ಸಹಾಯ ಮಾಡಿದ ಬಿ.ಮಹೇಶ್ವರಪ್ಪ ಹಾಗೂ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ದೂರವಾಣಿ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.