ಸುದ್ದಿವಿಜಯ,ಜಗಳೂರು: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಪ.ಜಾತಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ನವೀಕರಣ ಮತ್ತು ಹೊಸ ವಿದ್ಯಾರ್ಥಿಗಳ ಆನ್‍ಲೈನ್ ಪ್ರವೇಶಾತಿಗೆ (ಕೌನ್ಸಲಿಂಗ್) ಸಮಾಲೋಚನೆ ನಡೆಯಿತು.
ಮದ್ಯಾಹ್ನದಿಂದ ಆರಂಭವಾದ ಸಮಾಲೋಚನೆ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಆಯ್ಕೆಯಾದ ಮಕ್ಕಳಲ್ಲಿ ಸಂತಸ ಮೂಡಿತ್ತು. ವಂಚಿತ ವಿದ್ಯಾರ್ಥಿಗಳು ಮುಖವನ್ನು ಸಪ್ಪೆಗೆ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಧೈರ್ಯತುಂಬಿ ವಿದ್ಯಾರ್ಥಿ ನಿಲಯದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಬಡ ಹಾಗೂ ಆಸಕ್ತಿಯಿಂದ ಓದುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯ ಕಲ್ಪಿಸಲಾಗುವುದು ಎಂದರು.
ಪಟ್ಟಣದಲ್ಲಿ 3 ಪ.ಜಾತಿಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ 345 ವಿದ್ಯಾರ್ಥಿಗಳ ದಾಖಲಾತಿಗಾಗಿ ಮಂಜೂರಾಗಿದೆ, ಎಲ್ಲಾ ವರ್ಗದವರಿಗೂ ಮೀಸಲಾತಿಯಡಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಸುಸಜ್ಜಿತ ಕಟ್ಟಡ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಸತಿ ವ್ಯವಸ್ಥೆ, ಗುಣಮಟ್ಟದ ಆಹಾರ, ಶೌಚಾಲಯ, ಬೆಡ್ ಹಾಸಿಗೆ ವ್ಯವಸ್ಥೆ, ಕಿಟ್ ಸೇರಿದಂತೆ ಪೂರಕವಾದ ಸೌಲಭ್ಯ ಒದಗಿಸಲಾಗುವುದು ಎಂದರು.
ಹಾಸ್ಟೆಲ್‍ನಲ್ಲಿರುವ ಎಲ್ಲಾ ಮಕ್ಕಳ ಬಗ್ಗೆ ತುಂಬ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಲಾಗುವುದು, ಪಾಲಕರು ಯಾವುದೇ ರೀತಿಯ ಆತಂಕ ಪಡದೇ ಧೈರ್ಯದಿಂದ ಇರಬಹುದು ಎಂದರು.
ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕರಾದ ಮಹಾಬಲೇಶ್, ರುಬಿಯಾ, ದ್ವಿತಿಯ ದರ್ಜೆ ಸಹಾಯಕ ಉಮೇಶ್, ಸಿಬ್ಬಂದಿಗಳಾದ ರವಿ, ಅಲ್ಲಾಭಕ್ಷಿ, ಪರಸಪ್ಪ, ಮಂಜುನಾಥ್, ಸೌಜನ್ಯ, ಧನಂಜಯ್ ಸೇರಿದಂತೆ ಮತ್ತಿತರಿದ್ದರು.