ಸುದ್ದಿವಿಜಯ: ಜಗಳೂರು: ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಕಳೆದೆರಡು ತಿಂಗಳಿಂದ ಆಹಾರ ಧಾನ್ಯಗಳ ಪೂರೈಕೆ ಇಲ್ಲದೇ ತಾಲೂಕಿನಲ್ಲಿ ಯೋಜನೆ ಅಕ್ಷರಶಃ ಸ್ಥಗಿತಗೊಳ್ಳುವಂತಾಗಿದೆ.
2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟವನ್ನು ರಾಜ್ಯಾದ್ಯಂತ ಆರಂಭಿಸಿತ್ತು. ಒಂದನೇ ತರಗತಿಯಿಂದ ಎಂಟನೆ ತರಗತಿಯವರೆಗೂ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಅನ್ವಯವಾಗಿತ್ತು, ತದ ನಂತರ ಹತ್ತನೇ ತರಗತಿಯವರೆಗೂ ಮುಂದುವರಿಸಲಾಗಿದೆ.
ಈ ಪ್ರತಿಷ್ಠಿತ ಘನ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಿಯನ್ನು ಒಂದು ಸಂಸ್ಥೆಯನ್ನಾಗಿ ನೇಮಿಸಿದೆ, ಆದರೆ ಇತ್ತೀಚೆಗೆ ಆಹಾರ ಧಾನ್ಯ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.
ಜಗಳೂರು ತಾಲೂಕಿನಲ್ಲಿ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆ ಸೇರಿದಂತೆ ಒಟ್ಟು 233 ಶಾಲೆಗಳಲ್ಲಿ ಸುಮಾರು 21265 ಮಕ್ಕಳಿಗೆ ಈ ಬಿಸಿಯೂಟ ಉಪಯುಕ್ತವಾಗಿದೆ. ಅಕ್ಷರದಾಸೋಹ ಇಲಾಖೆ ಮಾರ್ಚ್ ತಿಂಗಳಲ್ಲಿ ಶಾಲೆಗಳಿಗೆ ಪಡಿತರ ವಿತರಿಸಿದ್ದು, ಅದು ಮೇ. ಅಂತ್ಯಕ್ಕೆ ಎಲ್ಲಾ ಶಾಲೆಗಳಲ್ಲೂ ಮುಕ್ತಾಯಗೊಂಡಿದೆ.
ಜೂನ್ ತಿಂಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಕೊರತೆಯಿಂದ ಕೆಲವೆಡೆ ಶಿಕ್ಷಕರು ಪಕ್ಕದ ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ಎಸ್‍ಡಿಎಂಸಿ ಸದಸ್ಯರು, ಗ್ರಾಮಸ್ಥರ ಸಹಕಾರದಿಂದ ಅಲ್ಪಸ್ವಲ್ಪ ಪಡಿತರ ಪಡೆದು ಬಿಸಿಯೂಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಹಾರ ಪದಾರ್ಥಗಳ ಕೊರತೆಯಿಂದ ಶಾಲಾ ವಿದ್ಯಾರ್ಥಿಗಳು ಹೊಟ್ಟೆತುಂಬ ಊಟವಿಲ್ಲದೇ, ಗುಣಮಟ್ಟದ ಆಹಾರ ಸಿಗದೇ, ಮನೆಯ ರಾತ್ರಿ ಊಟವನ್ನೇ ನೆಚ್ಚುವಂತಾಗಿದೆ.
ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕರನ್ನು ಈ ಕುರಿತು ವಿಚಾರಿಸಿದಾಗ ಇನ್ನು ಸರ್ಕಾರದಿಂದ ಪಡಿತರ ಪೂರೈಕೆಯಾಗಿಲ್ಲ, ಪೂರೈಕೆಯಾದ ತಕ್ಷಣ ಕಳುಹಿಸುತ್ತೇವೆ, ಸದ್ಯಕ್ಕೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಬೂಬು ಹೇಳುತ್ತಾರೆ ಎಂಬುವುದು ಶಿಕ್ಷಕರ ಅಳಲಾಗಿದೆ.
ಶಿಕ್ಷಕರಿಗೆ ತಲೆನೋವಾದ ಬಿಸಿಯೂಟ:
ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದೆಂದು ಸರ್ಕಾರದ ಆದೇಶವಿದೆ. ಆದರೆ ಪಡಿತರ ಕೊರತೆಯಿಂದ ಶಾಲಾ ಶಿಕ್ಷಕರು ಅತ್ತ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಬಿಸಿಯೂಟ ಒದಗಿಸಲಾಗದೇ, ಇತ್ತ ಪೂರ್ಣ ನಿಲ್ಲಿಸಲೂ ಆಗದೇ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ಯೋಜನೆಯ ಉದ್ದೇಶ:
ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವುದು, ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು, ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಮಕ್ಕಳ ಆರೋಗ್ಯವನ್ನು ಅಭಿವೃದ್ದಿಗೊಳಿಸುವುದು, ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವುದು, ರಾಷ್ಟ್ರೀಯ ಭಾವೈಕ್ಯೆ ಮೂಡಿಸುವ ಉದ್ದೇಶದಿಂದ ರೂಪುಗೊಂಡ ಯೋಜನೆಯೇ ಈ ಬಿಸಿಯೂಟ ಕಾರ್ಯಕ್ರಮ. ಆದರೆ ಇದು ಆಡಳಿತದ ವೈಫಲ್ಯವೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯೋ ಗೊತ್ತಿಲ್ಲ, ಬಿಸಿಯೂಟ ಕಾರ್ಯಕ್ರಮಹಳ್ಳ ಹಿಡಿಯುವತ್ತಾ ಸಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕ್ಷೀರ ಭಾಗ್ಯ ಯೋಜನೆಗೂ ಕಂಟಕ:
ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗಾಗಿ ರಾಜ್ಯ ಸರ್ಕಾರ ರೂಪಿಸಿದ ಕ್ಷೀರ ಭಾಗ್ಯ ಯೋಜನೆಯೂ ಹಾಲುಪುಡಿ ವಿತರಣೆ ಕೊರತೆಯಿಂದ ತಿಂಗಳಿಂದಲೂ ಮಕ್ಕಳಿಗೆ ಹಾಲು ವಿತರಣೆಯಾಗಿಲ್ಲ, ಹೀಗಾಗಿ ಶಾಲೆಯಲ್ಲಿ ಪ್ರಾರ್ಥನೆ ಮುಗಿದ ಕೂಡಲೇ ಮಕ್ಕಳ ಕೈಯಲ್ಲಿ ಕಂಡು ಬರುತ್ತಿದ್ದ ಹಾಲಿನ ಲೋಟಗಳು ಇದೀಗ ಮೂಲೆ ಸೇರಿವೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಪ.ಜಾತಿ ಹಾಗೂ ಪ.ಪಂಗಡಕ್ಕೆ ಸೇರಿದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಡವರ್ಗದ ಮಕ್ಕಳಿಗೆ ಬಿಸಿಯೂಟ ವರದಾನವಾಗಿತ್ತು. ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ರೈತರು ಮನೆಗಳಿಗೆ ಬೀಗ ಹಾಕಿ ಜಮೀನು ಸೇರಿದ್ದಾರೆ, ಮದ್ಯಾಹ್ನ ಬಿಸಿಯೂಟವನ್ನೇ ನಂಬಿಕೊಂಡಿದ್ದ ಶಾಲಾ ಮಕ್ಕಳು ಖಾಲಿ ಹೊಟ್ಟೆಯಲ್ಲಿ ತರಗತಿ ಕೇಳುವಂತಾಗಿದೆ. ಒಂದು ಕಡೆ ಕ್ಷೀರ ಭಾಗ್ಯವೂ ಇಲ್ಲದೇ, ಮತ್ತೊಂದು ಕಡೆ ಬಿಸಿಯೂಟ ಇಲ್ಲದೇ ಮಕ್ಕಳು ಹಸಿವಿನಿಂದಲೇ ಮನೆಗೆ ಮರಳುವಂತಾಗಿದೆ.
“ ಬಿಸಿಯೂಟ ಯೋಜನೆಯಿಂದ ಸಾವಿರಾರು ಬಡ ಮಕ್ಕಳಿಗೆ ತುಂಬ ಅನುಕೂಲವಾಗಿದೆ, ಈಗ ಮಳೆಗಾಲ ಆರಂಭವಾಗಿದ್ದು ಎಲ್ಲಾ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ, ಇದರಿಂದ ಮನೆಗಳಲ್ಲಿ ಮದ್ಯಾಹ್ನದ ಊಟ ಸಿಗುವುದಿಲ್ಲ, ಶಾಲೆಗಳಲ್ಲಿ ನೀಡುವ ಬಿಸಿಯೂಟದಿಂದ ಮಕ್ಕಳು ಊಟ ಮಾಡಿ ಮನೆಗೆ ಬರುತ್ತಿದ್ದಾರೆ, ಈಗ ಅದನ್ನು ನಿಲ್ಲಿಸಿದರೇ ಮಕ್ಕಳು ರಾತ್ರಿಯರೆವಗೂ ಹಸಿವಿನಿಂದ ಇರಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಕೂಡಲೇ ಸಮಸ್ಯೆ ಪರಿಹರಿಸಿ ಬಿಸಿಯೂಟ ಮುಂದುವರಿಸಲಿ”
-ಚಂದ್ರಪ್ಪ, ರಾಜು, ರಮೇಶ್ ಪಾಲಕರು. ಜಗಳೂರು
“ಟೆಂಟರ್ ಹಂತದಲ್ಲಿ ತಡವಾಗಿದ್ದರಿಂದ ಶಾಲೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲು ವಿಳಂಬವಾಗಿತ್ತು. ಈಗಾಗಲೇ ಸರಿಯಾಗಿದ್ದು, ಎರಡ್ಮೂರು ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ಪೂರೈಕೆ ಮಾಡಲಾಗುವುದು, ಬಿಸಿಯೂಟ ನಿಲ್ಲಿಸದಂತೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುವಂತೆ ಶಿಕ್ಷಕರಿಗೆ ತಿಳಿಸಲಾಗಿತ್ತು”
- ಶ್ರೀನಿವಾಸಗೌಡ, ಸಹಾಯಕ ನಿರ್ದೇಶಕ ಅಕ್ಷರ ದಾಸೋಹ ಇಲಾಖೆ.