ಸುದ್ದಿವಿಜಯ, ಜಗಳೂರು: ಸಂತೆಮುದ್ದಾಪುರ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ತಾಲೂಕಿನ ೧೬೪ ಜನ ವಸತಿ ಪ್ರದೇಶಗಳಿಗೆ ನೀರು ಪೂರೈಕೆ ರಾಜ್ಯ ಸರ್ಕಾರ 423 ಕೋಟಿ ರೂ ವೆಚ್ಚದ ಕಾಮಗಾರಿಗೆ ಅನುಮೋಧನೆ ನೀಡಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಸುಮಾರು ವರ್ಷಗಳಿಂದಲೂ ನೆನಗುದಿಗೆ ಬಿದ್ದಿದ್ದ ಯೋಜನೆಗೆ ಬಿಜೆಪಿ ಸರ್ಕಾರ ಜೀವ ತುಂಬಿದೆ. ಜಲ ಜೀವನ್ ಮೀಷನ್ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.
160 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯಲ್ಲಿ ಈಗಾಗಲೆ 22 ಗ್ರಾಮಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಉಳಿದ ಗ್ರಾಮಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಅರಸಿಕೆರೆ ಹೋಬಳಿಯ 7 ಗ್ರಾ.ಪಂಗಳಲ್ಲೂ 78 ಕೋಟಿಯಲ್ಲಿ ಕುಡಿಯವ ನೀರು ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಸಿರಿಗೆರೆ ಡಾ. ಶಿವಮೂರ್ತಿ ಶ್ರೀಗಳ ಇಚ್ಚಾಶಕ್ತಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ಸಿನತ್ತಾ ಸಾಗುತ್ತಿದೆ. ಈಗಾಗಲೇ ತುಪ್ಪದಹಳ್ಳಿ ಕೆರೆ ತುಂಬಿಸಲಾಗಿದೆ. ವರುಣನ ಕೃಪೆಯಿಂದ ಈ ಬಾರಿ 20 ವರ್ಷಗಳ ನಂತರ ಬಹುತೇಕ ಕೆರೆಗಳು ತುಂಬಿ 15 ಕೆರೆಗಳು ಕೋಡಿ ಬಿದ್ದಿವೆ, ಇದರಿಂದ ಅಂತರ್ಜಲ ವೃದ್ದಿಯಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಲಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಈಗಾಗಲೇ ಸರ್ವೇ ಕಾಮಗಾರಿ ಪೂರ್ಣಗೊಂಡಿದೆ ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು. ಜಗಳೂರು ಇತಿಹಾಸದಲ್ಲಿಯೇ ಮೂರು ದೊಡ್ಡ ಯೋಜನೆಗಳನ್ನು ರಾಜ್ಯ ಸರ್ಕಾರ ಕೊಟ್ಟಿರುವುದು ನಮ್ಮ ತಾಲೂಕಿನ ಜನತೆಯ ಸೌಭಾಗ್ಯ ಎಂದರು.
ಚರ್ಮಗಂಟಲು ರೋಗಕ್ಕೆ ಕ್ರಮ:
ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟಲು ರೋಗ ವ್ಯಾಪಕವಾಗಿ ಹರಡಿಕೊಂಡು ಈಗಾಗಲೇ ೬೦ಕ್ಕೂ ಹೆಚ್ಚು ಹಸು, ಎತ್ತುಗಳು ಸಾವನ್ನಪ್ಪಿವೆ. ಇದು ರೈತ ಕುಟುಂಬಗಳಿಗೆ ತುಂಬ ನೋವು ತಂದಿದೆ. ಇನ್ನು ಸಾವು-ನೋವು ಸಂಭವಿಸದಂತೆ ಮುಂಜಾಗ್ರತವಾಗಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ಪಶು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮೃತಪಟ್ಟಿರುವ ದನಗಳಿಗೆ ಸರ್ಕಾರದಿಂದ ಪರಿಹಾರ ನೀಡಲಿದೆ ಎಂದರು.
ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಸಮೀಕ್ಷೆ ಮಾಡಿ ವರದಿ ನೀಡಿವೆ. ಭಾಗಶಃ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇತ್ತೀಚೆಗೆ ಹಾನಿಯಾಗಿರುವ ಮನೆಗಳಿಗೆ ಪರಿಹಾರ ನೀಡಲಿದೆ ಎಂದು ಶಾಸಕರು ಹೇಳಿದರು.
ನ.22ಕ್ಕೆ ಸಂಕಲ್ಪಯಾತ್ರೆ:
ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿರುವ ಸಂಕಲ್ಪಯಾತ್ರೆ ತುಂಬ ಯಶಸ್ವಿಯಿಂದ ಸಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜಗಳೂರಿನಲ್ಲಿ ನ.22ಕ್ಕೆ ಸಂಕಲ್ಪಯಾತ್ರೆ ನಡೆಯಲಿದ್ದು ಸಿ.ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯಾತಿ ಗಣ್ಯರನ್ನು ಕರೆಯಿಸಿ ಬೃಹತ್ ಕಾರ್ಯಕ್ರಮ ಮಾಡಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಕುಮಾರಿ,ಮಾಜಿ ಜಿ.ಫಮ ಸದಸ್ಯ ಎಸ್.ಕೆ ಮಂಜುನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ, ಮಾಜಿ ಪ.ಪಂ ಅಧ್ಯಕ್ಷರಾದ ಆರ್. ತಿಪ್ಪೇಸ್ವಾಮಿ, ಎಸ್.ಸಿದ್ದಪ್ಪ, ಸದಸ್ಯ ಪಾಪಲಿಂಗಪ್ಪ, ಮುಖಂಡರಾದ ಶಿಕುಮಾರಸ್ವಾಮಿ, ಕಾನನಕಟ್ಟೆ ಪ್ರಭು, ಜೆ.ಎಚ್ ಮಹೇಶ್ ಸೇರಿದಂತೆ ಮತ್ತಿತರಿದ್ದರು.