ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಕಳ್ಳರು ರೈತರ ಹೊಲಗಳಲ್ಲಿ ಮೋಟಾರ್ ಪಂಪ್ ಸೆಟ್‌ಗಳಿಗೆ ಅಳವಡಿಸಲಾಗಿರುವ ಕೇಬಲ್‌ಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ ಎಂದು ರೈತರು ಆರೋಪಿಸಿ ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೋಲ್ಟೇಜ್ ಸಮಸ್ಯೆಯಿಂದ ಈಗಾಗಲೇ ಹೈರಾಣಾಗಿರುವ ರೈತರಿಗೆ ಕೇಬಲ್ ಕತ್ತರಿಸುವ ಕಳ್ಳರ ಕಾಟಕ್ಕೆ ರೋಸಿ ಹೋಗಿದ್ದಾರೆ. ಹೀಗಾಗಿ ರೈತರು ರಾತ್ರಿಯಿಡೀ ಹೊಲಗಳಲ್ಲಿ ಕಾವಲು ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಿಗೆಹಳ್ಳಿ ಗ್ರಾಮದ ಬಸವಪ್ರಭು, ಶಿವಕುಮಾರ್, ಬಸವನಗೌಡ, ತಿಪ್ಪೇಸ್ವಾಮಿ, ಅರಿಶಿಣಗುಂಡಿ ಗ್ರಾಮದ ಮಡಿವಾಳರ ಸಿದ್ದಲಿಂಗಪ್ಪ, ತೋರಣಗಟ್ಟೆ ಗ್ರಾಮದ ಕೆಲ ರೈತರ ಹೊಲಗಳಲ್ಲಿ ರಾತ್ರೋ ರಾತ್ರಿ ಬಂದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಅಂದಾಜು ೧೦ ಸಾವಿರ ರೂ ಅಧಿಕ ಬೆಲೆ ಬಾಳುವ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್ ವೈಯರ್‌ಗಳನ್ನು ಕತ್ತರಿಸಿ ಕೊಂಡೊಯ್ಯಿದಿರುವುದರಿAದ ರೈತರಿಗೆ ಸಂಕಷ್ಟ ಎದುರಾಗಿದೆ. ಇತ್ತ ಬೆಳೆಗಳು ವಿಪರೀತ ಬಿಸಿಲಿಗೆ ಬಾಡುತ್ತಿದ್ದು, ನಿತ್ಯ ನೀರಿನ ಅವಶ್ಯಕತೆಯಿದ್ದರೂ ಸಹ ಅಸಮರ್ಪಕ ವಿದ್ಯುತ್ ಕಣ್ಣಾಮುಚ್ಚಾಲೆ ಜೊತೆಗೆ ಟಿಸಿಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ಅವುಗಳನ್ನೆಲ್ಲಾ ನಿಭಾಯಿಸುವುದರ ಒಳಗೆ ಕೇಬಲ್ ಕಳ್ಳತನವಾಗುತ್ತಿರುವುದರಿಂದ ರೈತರು ರಾತ್ರಿಯಲ್ಲಾ ನಿದ್ದೆಯಿಲ್ಲದೇ ಬೆಳೆಗಳನ್ನು ಸಂಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಅಧಿಕಾರಿಗಳು ನ್ಯಾಯ ಒದಗಿಸಲಿ
ಕೇಬಲ್ ಕಳ್ಳತನ ಪ್ರಕರಣಗಳಿಂದ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಹಣ ಕೊಟ್ಟು ಹೊಸ ಉಪಕರಣಗಳನ್ನು ತಂದು ಅಳವಡಿಸಿದರೆ ರಾತ್ರೋ ರಾತ್ರಿ ಈ ರೀತಿ ಕಳ್ಳತನವಾಗುತ್ತಿರುವುದರಿಂದ ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ನ್ಯಾಯ ಒದಗಿಸಲಿ. ಕಳ್ಳರನ್ನು ಪತ್ತೆ ಹಚ್ಚಲು ರೈತರಿಗೆ ನೆರವಾಗಲಿ ಎಂದು ಕಟ್ಟಿಗೆಹಳ್ಳಿ ಗ್ರಾಮದ ಬಸವಪ್ರಭು, ತಿಪ್ಪೇಸ್ವಾಮಿ, ಬಸವನಗೌಡ ಸೇರಿದಂತೆ ಅನೇಕ ರೈತರು ಮನವಿ ಮಾಡಿದ್ದಾರೆ.