ಜಗಳೂರು: ಕೊಲೆ ಆರೋಪಿಗಳನ್ನು ಬಂಧಿಸದಿದ್ದರೆ ತಾಲೂಕು ಬಂದ್!

Suddivijaya
Suddivijaya January 10, 2023
Updated 2023/01/10 at 2:01 PM

ಸುದ್ದಿವಿಜಯ,ಜಗಳೂರು: ಸಾಮಾಜಿಕ ಕಾರ್ಯಕರ್ತ ಕೊಲೆ ಸಂಬಂಧ ಪೊಲೀಸರು ಶೀಘ್ರವೇ ಬಂಧಿಸದಿದ್ದರೆ ತಾಲೂಕು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಜಗಳೂರು ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಸೂರಲಿಂಗಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಕೃಷ್ಣ ಕೊಲೆ ಸಂಬಂಧ ಈಗಾಗಲೇ ಪಿಡಿಒ ಎ.ಟಿ.ನಾಗರಾಜ್ ಸೇರಿ 11 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆದರೂ ಇದುವರೆಗೂ ಬಂಧಿಸಿಲ್ಲ. ಕೊಲೆಯಾದ ಶನಿವಾರ ಮರುದಿನ ಭಾನುವಾರ ಹಿರೇಮಲ್ಲನಹೊಳೆ ಮತ್ತು ಗುತ್ತಿದುರ್ಗ ಗ್ರಾಪಂಗಳಲ್ಲಿ 40 ಲಕ್ಷಣಹಣವನ್ನು ಎ.ಟಿ.ನಾಗರಾಜ್ ಡ್ರಾ ಮಾಡಿರುವ ಆರೋಪ ಕೇಳಿಬಂದಿದೆ. ತಂತ್ರಜ್ಞಾನ ಇಷ್ಟೊಂದು ಮುಂಚೂಣೆಯಲ್ಲಿದ್ದರೂ ಪೊಲೀಸರು ಯಾಕೆ ಅವರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ವಕೀಲ ಓಬಳೇಶ್ ಮಾತನಾಡಿ, ಎಫ್‍ಐಆರ್ ದಾಖಲಾಗಿ ನಾಲ್ಕು ದಿನಗಳು ಕಳೆದಿವೆ. ಆದರೂ ಇದುವರೆಗೂ ಎ.ಟಿ.ನಾಗರಾಜ್ ಅವರನ್ನು ಬಂಧಿಸಲಾಗಿಲ್ಲ. ಅವರಿಗೆ ಪ್ರಭಾವಿಗಳು ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ.

 ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ನಾಯಕ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
 ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ನಾಯಕ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.

ಕೊಲೆ ಮಾಡಿರುವ ವ್ಯಕ್ತಿಯ ಎಷ್ಟೇ ಪ್ರಭಾವಶಾಲಿಯಾದರೂ ಕೂಡಲೇ ಅವರನ್ನು ಬಂಧಿಸಬೇಕು. ಕಾನೂನಾತ್ಮಕವಾಗಿ ತನಿಖೆ ಮಾಡಿ, ತನಿಖಾಧಿಕಾರಿಗಳು ಪ್ರಭಾವಕ್ಕೆ ಮಣಿಯದೇ ಪಾರದರ್ಶಕವಾಗಿ ತನಿಖೆಯಾಗಬೇಕು. ತನಿಖೆ ವಿಳಂಬವಾದರೆ ಸಾಕ್ಷಿಗಳ ನಾಶ ಪಡಿಸುವ ಸಾಧ್ಯತೆಯಿದೆ ಎಂದರು.

ನಾಯಕ ಸಮುದಾಯದ ಮುಖಂಡ ಕಣ್ವಕುಪ್ಪೆ ಗ್ರಾಮದ ವಕೀಲ ಸಣ್ಣ ಓಬಯ್ಯ ಮಾತನಾಡಿ, ಮೃತ ರಾಮಕೃಷ್ಣ ಅವರ ತಂಗಿ ರೇಖಾ ಅವರು ಕೆಲವು ಮಾಧ್ಯಮಗಳಲ್ಲಿ ಶಾಸಕರ ಕೈವಾಡದ ಇರುವ ಬಗ್ಗೆ ಮಾತನಾಡಿದ್ದಾರೆ. ರಾಜ್ಯಮಟ್ಟದ, ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸತ್ಯಾಂಶ ಹೊರಬರದಬೇಕಾದರೆ ಕೂಲಂಕಷವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ತಾಪಂ ಮಾಜಿ ಸದಸ್ಯ ಕುಬೇಂದ್ರಪ್ಪ, ಡಿ.ಆರ್.ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಲೋಕೇಶ್, ಸಿದ್ದಪ್ಪ, ಡಿಎಸ್‍ಎಸ್ ಮುಖಂಡ ಸತೀಶ್, ಮರೇನಹಳ್ಳಿ ಚಂದ್ರಶೇಖರ್, ನಾಗರಾಜ್, ರೇವಣ್ಣ, ಬಿ.ಎಚ್.ದಾಸಪ್ಪ, ನಜೀರ್ ಅಹ್ಮದ್, ಸಿದ್ದಪ್ಪ, ಹನುಮಂತಾಪುರ ರಾಜು, ಬಿ.ರಾಜಣ್ಣ, ಬಿ.ಓಬಳೇಶ್, ವಕೀಲರಾದ ಅಂಜಿನಪ್ಪ, ತಿಪ್ಪೇಸ್ವಾಮಿ, ಉಮಾಪತಿ ಸೇರಿದಂತೆ ಅನೇಕ ಮುಖಂಡರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!