ಸುದ್ದಿವಿಜಯ, ಬೆಂಗಳೂರು: ಕೆಎಂಎಫ್ ಉತ್ಪನ್ನಗಳಲ್ಲಿ ಮುಖ್ಯವಾಗಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರಗಳು ಸೋಮವಾರದಿಂದಲೇ 1ರಿಂದ 3 ರೂ ನಷ್ಟು ರಷ್ಟು ಏರಿಕೆಯಾಗಲಿವೆ.
200 ಗ್ರಾಂ ಮೊಸರು ದರ 10 ರಿಂದ 12ಕ್ಕೆ ಹೆಚ್ಚಳವಾಗಿದೆ. 200 ಮಿ.ಲೀ. ಸ್ಯಾಚೆಯ ಮಜ್ಜಿಗೆ ದರವು 7 ರಿಂದ 8ಕ್ಕೆ ಮತ್ತು 200 ಮಿ.ಲೀ. ಸ್ಯಾಚೆಯ ಲಸ್ಸಿ ದರವನ್ನು 10ರಿಂದ 11ಕ್ಕೆ ಹೆಚ್ಚಿಸಲಾಗಿದೆ.
ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪ್ಯಾಕೇಜ್ ಡೇರಿ ಮತ್ತು ಇತರ ಆಹಾರ ಉತ್ಪನ್ನಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ಈ ಉತ್ಪನ್ನಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.
ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದರಿಂದ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮೇಲಿನ ದರಗಳನ್ನು ಸಹ ಪರಿಷ್ಕರಿಸಲಾಗಿದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಪ್ರಕಟಣೆ ತಿಳಿಸಿದೆ.
ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದೆ. ಈ ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಮುಗಿಯುವವರೆಗೆ ಇಂಕ್‌ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.
‘ಜಿಎಸ್‌ಟಿಯಿಂದ ಹೊರೆಯಿಂದ ಉಂಟಾಗಿರುವ ಕೊರತೆಯನ್ನು ಭರ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ದರಗಳನ್ನು ಪರಿಷ್ಕರಿಸಲಾಗಿದೆ. ಇದರಿಂದ, ಕೆಎಂಎಫ್‌ಗೆ ಯಾವುದೇ ರೀತಿಯ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಸಾಮಾನ್ಯ ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ದರಗಳನ್ನು ಪರಿಷ್ಕರಿಸಲಾಗಿದೆ. ಇದು ಕೇವಲ ಪರಿಹಾರ ರೂಪದ ದರ ಪರಿಷ್ಕರಣೆ’ ಎಂದು ಕೆಎಂಎಫ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.