ಸುದ್ದಿವಿಜಯ, ಜಗಳೂರು: 2022-23ನೇ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಜಗಳೂರು ಪಟ್ಟಣದ ಎನ್‍ಎಂಕೆ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರತಿವರ್ಷ ನೀಡಲಾಗುವ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಎನ್‍ಎಂಕೆ ಶಾಲೆಯ ನಮ್ಮ ವಿದ್ಯಾರ್ಥಿ ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಎಂ.ಸಿ ಮಂಜುನಾಥ್ ಅವರ ಪುತ್ರರಾದ ಅವರಿಗೆ ಇದೇ ನ.14ರಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ಜವಾಹರ್ ಬಾಲಭವನದಲ್ಲಿ ನಡೆಯಲಿರುವ ಮಕ್ಕಳ ದಿನಾಚರಣೆಯಂದು ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಂದ ಅಧಿಕೃತ ಆಹ್ವಾನ ಬಂದಿದೆ ಎಂದು ತಿಳಿಸಿದರು.

ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಹೇಗೆ?
ಇದೇ ವರ್ಷ ಆಗಸ್ಟ್ 21 ರಂದು ಕುಟುಂಬ ಸಮೇತ ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ತಂದೆ ಮಂಜುನಾಥ್ ಅವರು ಜಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋರಟಿದ್ದರು. ಬೆಳಗಿನ ಜಾವವಾಗಿದ್ದರಿಂದ ನಾಯಿ ಅಡ್ಡ ಬಂದಿದ್ದನ್ನು ತಪ್ಪಿಸಲು ಹೋದಾಗ ಕಾರು ಪಲ್ಟಿ ಆಯ್ತು.
ಕಾರಿನ ಡೋರ್‍ಗಳು ಲಾಕ್ ಆಗಿದ್ದವು. ಅದರಲ್ಲಿದ್ದ ತಾಯಿ ಶ್ರುತಿ ಅವರಿಗೆ ಕೈ ಮೂಳೆ ಮುರಿದಿತ್ತು. ತಂದೆಯ ಸೊಂಟಕ್ಕೆ ಬಲವಾದ ಏಟು ಬಿದ್ದಿತ್ತು. ತಂಗಿ ಸಾತ್ವಿಕಾಗೆ ಕಾರಿನ ಗ್ಲಾಸ್‍ಗಳು ಚುಚ್ಚಿ ನರಳುತ್ತಿದ್ದರು.
ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಅವರಿಗೂ ಗ್ಲಾಸ್‍ಗಳು ಚುಚ್ಚಿ ಕೈಗಳು ಗಾಯಗಳಾಗಿದ್ದವು. ಆದರೂ ಎದೆ ಗುಂದದೇ ಮೆಟಲ್ ಬಾಟಲಿಯಿಂದ ವಿಂಡ್ ಶೀಲ್ಡ್ ಗ್ಲಾಸ್ ಒಡೆದು ತಂಗಿಯನ್ನು ಮೊದಲು ರಕ್ಷಿಸಿದರು. ನಂತರ ತಾಯಿಯನ್ನು ನಿಧಾನವಾಗಿ ಹೊರ ಕರೆದುಕೊಂಡು ಬಂದರು.
ನಂತರ ತಂದೆಯನ್ನು ಹೊರಗೆ ಕರೆತಂದು ಪೊಲೀಸ್ ಮತ್ತು ಅಂಬುಲೆನ್ಸ್‍ಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿ ಎಲ್ಲರನ್ನೂ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದರು.
ಈ ವಿಷಯವನ್ನು ಮಂಜುನಾಥ್ ಅವರು ಸ್ನೇಹಿತರೊಂದಿಗೆ ಹಂಚಿಕೊಂಡರು. ಸ್ನೇಹಿತರ ಸಲಹೆ ಮೇರೆಗೆ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಅಪ್ಲೇ ಮಾಡಿ ಎಂದಾಗ ನಿಯಮಗಳ ಅನುಸಾರ ಸರಕಾರಕ್ಕೆ ಅರ್ಜಿಸಲ್ಲಿಸಿದರು.
ಮಾಸ್ಟರ್ ಕೀರ್ತಿ ವಿವೇಕ್.ಎಂ ಸಾಹುಕಾರ್ ಅವರ ಶೌರ್ಯವನ್ನು ಮೆಚ್ಚಿ ಸರಕಾರ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಂದೆ ಮಂಜುನಾಥ್ ಸುದ್ದಿವಿಜಯ ವೆಬ್ ನ್ಯೂಸ್ ಗೆ ಮಾಹಿತಿ ನೀಡಿದರು.
Congratulations kerti putta all the best