ಸುದ್ದಿವಿಜಯ,ಜಗಳೂರು: ಪಟ್ಟಣದ ಎನ್‍ಎಂಕೆ ಆಂಗ್ಲ ಮಾಧ್ಯಮ ಶಾಲೆಯ ವಾಹನ ಮಕ್ಕಳನ್ನು ಡ್ರಾಪ್ ಮಾಡಲು ತೆರಳುತ್ತಿರುವಾಗ ತಾಲೂಕಿನ ರಸ್ತೆಮಾಚಿಕೆರೆ ಬಳಿ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಅಪಘಾತವಾಗಿದ್ದು ಚಾಲಕ ಮತ್ತು ನಿರ್ವಹಕ ಸೇರಿ ಐದು ಮಕ್ಕಳಿಗೆ ಗಾಯಗಳಾಗಿವೆ ಎಂದು ಜಗಳೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಗಳೂರು ಪಟ್ಟಣದಿಂದ ದಾವಣಗೆರೆ ಮಾರ್ಗವಾಗಿ ದೇವಿಕೆರೆ, ಮೆದಿಕೇರನಹಳ್ಳಿ ಮತ್ತು ಬಸವಾಪುರ ಗ್ರಾಮಗಳಿಗೆ ಮಕ್ಕಳನ್ನು ಕರೆದೊಯ್ಯುತ್ತಿರುವಾಗ ರಸ್ತೆ ಮಾಚಿಕೆರೆ ಗ್ರಾಮದ ಬಳಿ ಈ ದುರ್ಗಘಟನೆ ನಡೆದಿದೆ.
ಬೇರೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋದಾಗ ಎದುರಿಗೆ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸುವಾಗ ಚಾಲಕ ರುದ್ರೇಶ್ ಅವರಿಗೆ ಬಸ್ ಹಿಡಿತಕ್ಕೆ ಸಿಗದೇ ಮಕ್ಕಳನ್ನು ರಕ್ಷಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಚಾಲಕ ರುದ್ರೇಶ್ ಅವರ ಎರಡೂ ಕಾಲುಗಳು ಮುರಿದಿವೆ. ನಿರ್ವಾಹಕ ಉಚ್ಚೆಂಗೆಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಂದು ಮಗುವಿನ ತೊಡೆಯ ಮೂಳೆ ಮುರಿದಿದ್ದು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಾಲಕ ಮತ್ತು ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಒಂದು ಮಗುವನ್ನು ಜಗಳೂರು ಸರಕಾರಿ ಆಸ್ಪತ್ರೆಗೆ ಮತ್ತಿಬ್ಬರು ಮಕ್ಕಳನ್ನು ಜಗಳೂರಿನ ರಾಘವೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಗಾಬರಿ ಪಡುವ ಅಗತ್ಯವಿಲ್ಲ ಎಂದು ಶಾಲೆಯ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಮಾಹಿತಿ ನೀಡಿದ್ದಾರೆ. ಜಗಳೂರು ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
07ಜೆಎಲ್‍ಆರ್‍ಚಿತ್ರ1ಎ: