ಸುದ್ದಿವಿಜಯ, ಜಗಳೂರು:ರಾಜ್ಯ ಸರ್ಕಾರ ಎನ್‍ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಸರಕಾರ ಎನ್‍ಪಿಎಸ್ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿಸ ರೂಪಿಸಿದ ನೌಕರರು ಹಳೆ ಪಿಂಚಣಿಗೆ ಹಕ್ಕೋತ್ತಾಯಿಸಿದರು. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಪ್ರವಾಸಿ ಮಂದಿರಕ್ಕೆ ತೆರಳಿ ಸರಕಾರಗಳು ವಿರುದ್ದ ಘೋಷಣೆಗಳನ್ನು ಕೂಗಿದರು.
ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ ಮಾತನಾಡಿ, 2006 ಏಪ್ರಿಲ್ 1 ರಿಂದ ನೇಮಕವಾದ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ, ಎನ್‍ಪಿಎಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ನಿವೃತ್ತಿಯಾದ ನೌಕರರು ಸಂಧ್ಯಾಕಾಲದಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಒಂದು ವೇಳೆ ನೌಕರರು ಅಕಾಲಿಕ ಮರಣ ಹೊಂದಿದರೆ ಕುಟುಂಬ ಬೀದಿ ಪಾಲಾಗುತ್ತದೆ.
ಹೀಗಾಗಿ, ಸರ್ಕಾರ ಕೂಡಲೇ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು. ಹಲವು ಬಾರಿ ಮನವಿ ನೀಡಿದರೂ ಸರಕಾರಕ್ಕೆ ಮಾತ್ರ ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಒತ್ತಾಯಿಸಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್ ಬಾಬುರೆಡ್ಡಿ ಮಾತನಾಡಿ, ಡಿ.19 ರಂದು ಮಾಡು ಇಲ್ಲವೇ ಮಡಿ ಎಂಬ ವಾಕ್ಯದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರಕಾರಕ್ಕೆ ಇದು ಚುನಾವಣೆ ಪರ್ವ ಕಾಲ ಆಗಿರುವುದರಿಂದ ನೂರಾರು ಬೇಡಿಕೆಗಳಿರುತ್ತವೆ. ರಾಜಸ್ಥಾನ, ಛತ್ತೀಸ್‍ಗಢ, ಜಾಖರ್ಂಡ್, ಪಂಜಾಬ್ ರಾಜ್ಯಗಳಲ್ಲಿ ಎನ್‍ಪಿಎಸ್ ಯೋಜನೆಯನ್ನು ಹೀಗಾಗಲೇ ರದ್ದುಪಡಿಸಲಾಗಿದೆ. ಆದ್ದರಿಂದ ಇದರಲ್ಲಿ ನಮ್ಮ ಬೇಡಿಕೆಯನ್ನು ಮೊದಲು ಪರಿಗಣಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.

ಡಿಸೆಂಬರ್ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾಮೂಹಿಕ ಹೋರಾಟವನ್ನು ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೆ ನೌಕರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಸಾಗಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗುವುದು. ಇನ್ನು ಯಾತ್ರೆಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ ಎಂದರು.
ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಎನ್‍ಪಿಎಸ್ ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು, ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ್ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಮಂದಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರು ಇದ್ದು, ಅವರಿಗೆ ಯಾವುದೇ ರೀತಿ ಎನ್‍ಪಿಎಸ್ ಯೋಜನೆ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಲ್ಲ. ಹೊಸ ಪಿಂಚಣಿ ಯೋಜನೆಯಡಿ ನಿವೃತ್ತರಾದ ನೌಕರರಿಗೆ ತಿಂಗಳಿಗೆ ಬರೀ 2ರಿಂದ 3ಸಾವಿರ ರೂ ಒಳಗೆ ಪಿಂಚಣಿ ಬರುತ್ತಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.
ಈ ವೇಳೆ ಎನ್‍ಪಿಎಸ್ ಅಧ್ಯಕ್ಷ ಬಡಣಕಾರ್ ಡಿ.ಎಸ್. ಕಾರ್ಯದರ್ಶಿ ಬಿ.ಎಂ ದೊಡ್ಡಪ್ಪ, ಜಿಲ್ಲಾ ಪದಾಧಿಕಾರಿ ಟಿ. ನಾಗರಾಜ್, ಖಜಾಂಚಿ ಮಹೇಶ್, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಬಿ.ಎಂ ಹನುಮಂತೇಶ್, ಗೌ.ಅಧ್ಯಕ್ಷ ಉಲೇಪ್ಪ, ಸಹ ಕಾರ್ಯದರ್ಶಿ ಎಂ.ಪ್ರಕಾಶ್, ಕಾರ್ಯದರ್ಶಿ ಅಂಜಿನನಾಯ್ಕ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಬಸವರಾಜ್, ಮಧು, ಕಲೀನಾಥ್, ವೆಂಕಟೇಶ್, ವಿಶ್ವನಾಥ್, ಪದವಿಧರರ ಸಂಘದ ಅಧ್ಯಕ್ಷ ರಾಜ್‍ಕೋಟಿ, ಕಾರ್ಯದರ್ಶಿ ಎಂ.ಕೆ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಮಂಜುನಾಥ್, ಬಸವರಾಜ್, ತಿರುಮಲೇಶ್ , ಕೆಇಬಿ ಲೋಕೇಶ್ ಸೇರಿದಂತೆ ಮತ್ತಿತರಿದ್ದರು.