ಜಗಳೂರು ಪಟ್ಟಣದಲ್ಲಿ ಹಂದಿಗಳ ಹಾವಳಿ ಬಗ್ಗೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ

Suddivijaya
Suddivijaya February 8, 2023
Updated 2023/02/08 at 11:24 AM

ಸುದ್ದಿವಿಜಯ, ಜಗಳೂರು: ಹಾದಿ ಬೀದಿಗಳಲ್ಲಿ ಹಂದಿಗಳ ಕಾಟದಿಂದ ಜನ ರೋಸಿ ಹೋಗಿದ್ದಾರೆ. ಚರಂಡಿಗಳಲ್ಲಿ ಗಬ್ಬುವಾಸನೆ. ಎಲ್ಲೆಂದರಲ್ಲಿ ಅವುಗಳ ಉಪಟಳದಿಂದ ಪಟ್ಟಣ ಹಂದಿ ಸಿಟಿಯಾಗಿದೆ. ಅವುಗಳನ್ನು ಸ್ಥಳಾಂತರಿಸದಿದ್ದರೆ ಜನರು ಹಿಡಿ ಶಾಪ ಹಾಕುತ್ತಾರೆ ಎಂದು ಪಪಂ ಸರ್ವ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಂದಿಗಳ ತೆರವು, ಸ್ವಚ್ಛತೆ, ರಸ್ತೆ ದುರಸ್ಥೀಕರಣ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬುಧವಾರ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಮಧ್ಯೆ ಪರಸ್ಪರ ವಾಕ್ಸಮರಗಳು ನಡೆದವು.

ಸಭೆ ಆರಂಭವಾಗುತ್ತಿದ್ದಂತೆ ಸಾಮಾನ್ಯ ಸಭೆಯ ಅಜೆಂಡಾದಂತೆ ಮೊದಲಿಗೆ ಹಂದಿಗಳು ಬೀಡಾಡಿ ದನಗಳಂತೆ ಎಲ್ಲೆಂದರಲ್ಲಿ ಓಡಾಡುತ್ತಿವೆ. ಮಕ್ಕಳ ಮೇಲೆ ನುಗ್ಗುತ್ತಿವೆ. ಅವುಗಳ ಮಾಲೀಕರಿಗೆ ಹೇಳಿ ಸ್ಥಳಾಂತಿರಸಲು ಸೂಚನೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಹಂದಿಗಳ ಕಾಟದಿಂದ ಪಟ್ಟಣದ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಹಾಗಾಗಿ ಒಂದು ವಾರದೊಳಗೆ ಎಲ್ಲಾ ಹಂದಿಗಳನ್ನು ಸ್ಥಳಾಂತರಿಸುವಂತೆ ಮಾಲೀಕರಿಗೆ ನೋಟಿಸ್ ಕಳುಹಿಸಿ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.

  ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ವಿಶಾಲಾಕ್ಷಿ, ಮುಖ್ಯಾಧಿಕಾರಿ ಲೋಕ್ಯನಾಯ್ಕ ಇದ್ದರು.
ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ವಿಶಾಲಾಕ್ಷಿ, ಮುಖ್ಯಾಧಿಕಾರಿ ಲೋಕ್ಯನಾಯ್ಕ ಇದ್ದರು.

ಹಲವು ಬಾರಿ ಹಂದಿಗಳನ್ನು ಹಿಡಿದು ಮಾರಾಟ ಮಾಡಿಕೊಳ್ಳಿ ಇಲ್ಲವೇ ಮತ್ತೊಂದು ಕಡೆ ಸ್ಥಳಾಂತರಿಸುವಂತೆ ತಿಳಿಸಿದ್ದರೂ ಸಹ ಮಾಲೀಕರು ನಿರ್ಲಕ್ಷ ತೋರಿದ್ದಾರೆ. ಒಂದು ಹಂದಿಯೂ ಕಣ್ಣಿಗೆ ಕಾಣದಂತೆ ಸಾಗಾಟ ಮಾಡಬೇಕು, ಇಲ್ಲವೆ ನಮ್ಮ ಸಿಬ್ಬಂದಿಗಳಿಂದ ಹಿಡಿಸಲಾಗುವುದು, ತಕರಾರು ಮಾಡಿದರೆ ನಿಮ್ಮ ವಿರುದ್ದ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸದಸ್ಯ ರವಿಕುಮಾರ್ ಮಾತನಾಡಿ, ಹಂದಿ ಸಾಕಾಣಿಕೆದಾರರಿಗೆ ಪಟ್ಟಣದ ಹೊರವಲಯದಲ್ಲಿ ಒಂದಷ್ಟು ಜಾಗ ನೀಡಿದರೆ ಹಂದಿ ಸಾಕಲು ತುಂಬ ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಿ ಎಂದು ಅಧಿಕಾರಿಗಳಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಜಾಗ ಸಿಗುವುದು ತುಂಬ ಕಷ್ಟ, ಆದರೂ ಪ್ರಸ್ತಾವನೆ ಕಳಿಸಲಾಗುವುದು ಎಂದು ಭರವಸೆ ನೀಡಿದರು.

ಪ.ಪಂ ಸದಸ್ಯ ಆರ್. ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿವೆ. ಮರಿ ಸೇರಿದಂತೆ ನೂರಾರು ಹಂದಿಗಳು ಬೀದಿ ಬೀದಿಗಳಲ್ಲಿ ಸುತ್ತಾಡುತ್ತಾ ಪರಿಸರವನ್ನು ಹಾಳು ಮಾಡುತ್ತಿವೆ. ಚರಂಡಿ, ತಗ್ಗು, ಗುಂಡಿಗಳಲ್ಲಿ ಮಲಗುವ ಹಂದಿಗಳಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು ಅನೇಕ ರೋಗಗಳು ಸೃಜನೆಯಾಗುತ್ತಿದೆ. ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.

ಪಟ್ಟಣದ ಬಹುತೇಕ ರಸ್ತೆಗಳೆಲ್ಲಾ ಕಿರಿದಾಗಿವೆ, ಎಸ್‍ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಹಳೆ ಮಹಾತ್ಮ ಗಾಂಧಿ ವೃತ್ತ, ಪೊಲೀಸ್ ಠಾಣೆಯ ಮುಂಭಾಗ ಹೀಗೆ ಹಲವರು ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಮತ್ತು ಕಾರುಗಳು ಎಲ್ಲಂದರಲ್ಲಿ ಅಡ್ಡ ದಿಡ್ಡಿ ವಾಹನಗಳು ನಿಲ್ಲಿಸುವುದರಿಂದ ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ.

ಹಾಗಾಗಿ ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತಿ ಮೂಡಿಸಿ ಸಿಬ್ಬಂದಿಗಳನ್ನು ನೇಮಕ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಪ್ಪೇಸ್ವಾಮಿ, ಲುಕ್ಮಾನ್ ಉಲ್ಲಾ ಖಾನ್, ರವಿಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.

  ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ವಿಶಾಲಾಕ್ಷಿ, ಮುಖ್ಯಾಧಿಕಾರಿ ಲೋಕ್ಯನಾಯ್ಕ ಇದ್ದರು.
ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ವಿಶಾಲಾಕ್ಷಿ, ಮುಖ್ಯಾಧಿಕಾರಿ ಲೋಕ್ಯನಾಯ್ಕ ಇದ್ದರು.

ಜೊತೆಗೆ ಪಟ್ಟಣದಲ್ಲಿ ಬೀಡಾಡಿ ದನಗಳು, ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯ ರಸ್ತೆ, ಕಚೇರಿ, ಬ್ಯಾಂಕ್‍ಗಳ ಮುಂದೆ ಹಿಂಡು ಬಿಡಾಡಿ ದನಗಳು ಮಲಗುತ್ತವೆ. ಬೀದಿಗಳಲ್ಲಿ ನಾಯಿಗಳು ಹೆಚ್ಚಾಗಿವೆ, ಚಿಕ್ಕ ಮಕ್ಕಳು ಓಡಾಡುವುದಕ್ಕೂ ಭಯ ಪಡುತ್ತಾರೆ ಇವುಗಳನ್ನು ಹತೋಟಿಗೆ ತರಲು ಕ್ರಮಕೈಗೊಳ್ಳಬೇಕು ಎಂದು ಅನೇಕ ಸದಸ್ಯರು ಒತ್ತಾಯಿಸಿದರು.

ಹುಟ್ಟು, ಸಾವು, ಸಮಾರಂಭ, ಸಿನಿಮಾ ಹೀಗೆ ವಿವಿಧ ಕಾರ್ಯಕ್ರಮಗಳಿಗೆ ಫ್ಲೆಕ್ಸ್, ಬ್ಯಾನರ್‍ಗಳು ರಾರಾಜಿಸುತ್ತವೆ. ಅಲ್ಲದೇ ಮನಸ್ಸಿಗೆ ಬಂದಾಗೆ ಹಾಕುತ್ತಿರುವುದರಿಂದ ಜನರಿಗೆ ಕಿರಿಕಿರಿಯುಂಟು ಮಾಡುತ್ತದೆ.

ಇನ್ನು ಮುಂದೆ ಯಾವುದೇ ಫ್ಲೆಕ್ಸ್, ಬ್ಯಾನರ್‍ಗಳನ್ನು ಫೀಂಟ್ ಮಾಡುವ ಮೊದಲು ಪ.ಪಂನಿಂದ ಅನುಮತಿ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು ಎಂದು ಮುಖ್ಯಾಧಿಕಾರಿ ಲೋಕ್ಯನಾಯ್ಕ ಫ್ಲೆಕ್ಸ್ ತಯಾರಕರಿಗೆ ಎಚ್ಚರಿಕೆ ನೀಡಿದರು.

ಅಂಗಡಿಯವರಿಗೆ ಹೇಳುವುದಕ್ಕಿಂತ ಫ್ಲೆಕ್ಸ್ ಹಾಕಿಸುವವರಿಗೆ ದರ ನಿಗದಿಪಡಿಸಬೇಕು, ಹಣ ಕಟ್ಟದಿದ್ದರೆ ಅಂತವರಿಗೆ ಅವಕಾಶ ನೀಡಬಾರದು, ಹೀಗೆ ಮಾಡುವುದರಿಂದ ಪ.ಪಂಗೆ ಆದಾಯ ಬರುತ್ತದೆ ಜತೆಗೆ ಬ್ಯಾನರ್ ಹಾವಳಿಗೆ ಕಡಿವಾಣ ಹಾಕಬಹುವುದು ಎಂದು ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಪಾಪಲಿಂಗಪ್ಪ, ಓಬಳೇಶ್, ಡಾ. ಮಹಾದೇವಪ್ಪ, ಮುಖಂಡರಾದ ಗೌರಿಪುರ ಶಿವಣ್ಣ, ರಮೇಶ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!