ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾದ ತೊರೆಸಿದ್ದಿಹಳ್ಳಿ ಗ್ರಾಮಕ್ಕೆ ಡಾ.ಬಾಬು ಜಗಜೀವನ್ ರಾಂ ಚರ್ಮ ಮತ್ತು ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಸರಕಾರ ಹಣ ಬಿಡುಗಡೆ ಮಾಡಿದೆ. ಗ್ರಾಮಸ್ಥರಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಭವನ ನಿರ್ಮಾಣ ಬೇಡ ಎಂದು ವಿರೋಧಿಸಿದರೆ ದಲಿತರಿಗೆ ನಷ್ಟ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಕಿವಿ ಮಾತು ಹೇಳಿದರು.
ಸವರ್ಣಿಯರು ಮತ್ತು ದಲಿತರ ಮಧ್ಯೆ ಕ್ಷೌರ ನಿರಾಕರಣೆ, ಭವನ ನಿರ್ಮಾಣಕ್ಕೆ ಜಾಗ ಗೊಂದಲ ಮತ್ತು ದಲಿತರು ದೇವಸ್ಥಾನ ನಿರಾಕರಣೆ ಸಂಬಂಧಿಸಿದಂತೆ ಬೂದಿ ಮುಚ್ಚಿದ ಕೆಂಡದಂತಿದ್ದ ತಾಲೂಕಿನ ತೊರೆಸಿದ್ಧಿಹಳ್ಳಿ ಗ್ರಾಮದಲ್ಲಿ ಸೋಮವಾರ ಸಮಾಜ ಕಲ್ಯಾಣ, ಕಂದಾಯ ಮತ್ತು ಪೊಲಿಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ದಲಿತರಿಗೆ ಕ್ಷೌರ ನಿಕಾಕರಣೆಯಿಂದ ಇಡೀ ಜಿಲ್ಲೆಯಲ್ಲೇ ದೊಡ್ಡ ಸುದ್ದಿಯಾಗಿದ್ದು ಈ ಗ್ರಾಮದ ಸಮಸ್ಯೆಯನ್ನು ಡಿಎಸ್‍ಪಿ, ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ನಾನು ಮಧ್ಯ ಪ್ರವೇಶಿಸಿ ಶಾಂತಿ ಭಂಗವಾಗದಂತೆ ಬಗೆಹರಿಸಿದ್ದೇವೆ. ಈಗ ಮಂಜೂರಾಗಿರುವ ಕೋಟ್ಯಂತರ ರೂ ವೆಚ್ಚದ ಎರಡು ಎಕರೆ ಜಾಗದಲ್ಲಿ ಬೃಹತ್ ಭವನಕ್ಕೆ ದಲಿತರೇ ವಿರೋಧಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಕೋಲಾರ, ಮಂಗಳೂರು ಹೊರತು ಪಡಿಸಿದರೆ ತಾಲೂಕಿನ ತೊರೆಸಿದ್ದಿಹಳ್ಳಿಗೆ ಸ.ನಂ 75ರಲ್ಲಿ ಸಮುದಾಯ ಭವನ ಜಾಗ ಮಂಜೂರಾತಿ ಮತ್ತು ಸರಕಾರದಿಂದ ಹಣ ಬಿಡುಗಡೆಗಾಗಿ ಮೂರು ತಿಂಗಳು ಸತತ ಪ್ರಯತ್ನಪಟ್ಟಿದ್ದೇನೆ. ದಲಿತ ಹೋರಾಟಗಾರ ಕುಬೇರಪ್ಪ ಅವರು ಸತತ ಹೋರಾಟದ ಫಲವಾಗಿ ಈ ಯೋಜನೆ ಗ್ರಾಮಕ್ಕೆ ಮಂಜೂರಾಗಿದೆ.
ಇದು ನಿರ್ಮಾಣವಾದರೆ ದಲಿತ ಯುವಕರಿಗೆ ಸ್ವಯಂ ಉದ್ದೋಗದ ಜೊತೆ ಭದ್ರತೆ ಸಿಕ್ಕಂತಾಗುತ್ತದೆ. ಸುತ್ತಮುತ್ತಲ ಗ್ರಾಮಗಳ ದಲಿತ ಯುವ ಜನಾಂಗಕ್ಕೆ ಬದುಕಲು ದಾರಿಯಾಗುತ್ತದೆ. ಅಷ್ಟೇ ಅಲ್ಲ ಎಲ್ಲ ಸಮುದಾಯಗಳಿಗಳಿಗೆ ಈ ಸಮುದಾಯ ಭವನ ಬಳಕೆಯಾಗುತ್ತದೆ.
ಅವಕಾಶ ಬಳಸಿಕೊಳ್ಳಿ. ಅವಕಾಶ ಬೇಡ ಎಂದರೆ ಯೋಜನೆ ಕೈ ತಪ್ಪುತ್ತದೆ. ದಲಿತ ಸಮುದಾಯದ ಹಿರಿಯ ಮುಖಂಡರು, ದಲಿತ ಯುವಕರೊಂದಿಗೆ ಸೌಹಾರ್ಧತೆಯಿಂದ ಮಾತುಕತೆ ನಡೆಸಿ ತೀರ್ಮಾನ ತಿಳಿಸಿ. ಹಿಂದುಳಿದ ಪ್ರದೇಶ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಉದ್ದೇಶ. ಯಾರೋ ನಾಲ್ವರು ವಿರೋಧಿಸಿದರೆ ಅದು ಸರಿಯಲ್ಲ ಎಂದು ಬುದ್ದಿ ಮಾತು ಹೇಳಿದರು.
ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ಮಾತನಾಡಿ, ದಲಿತರು ದೇವಸ್ಥಾನ ಪ್ರವೇಶ ನಿರಾಕರಣೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ. ಸಾರ್ವಜನಿಕ ಆಸ್ತಿಯಾಗಿರುವ ದೇವಸ್ಥಾನಗಳಿಗೆ ದಲಿತರ ಹೋಗಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಎರಡು ಎಕರೆ ಜಾಗದಲ್ಲಿ ಡಾ.ಬಾಬು ಜಗಜೀವನ್ ರಾಂ ಎಂಪೋರಿಯಂ ನಿರ್ಮಾಣವಾದರೆ ದಲಿತ ಯುವಜನಾಂಗದ ಕೌಶಲ್ಯ ವೃದ್ಧಿಗೆ ಅದು ವೇದಿಕೆಯಾಗುತ್ತದೆ. ಎರಡು ಎಕರೆ ಜಾಗದಲ್ಲಿ ಈ ಈ ಭವನ ನಿರ್ಮಾಣವಾಗುವುದು ಸೂಕ್ತ.
ಕೋಟ್ಯಂತರ ಮೌಲನ್ಯದ ಸೊತ್ತು ನಿಮಗೆ ಸೇರುತ್ತದೆ. ಅದರ ಉಪಯೋಗ ಪಡೆಯಬೇಕು ಜೊತೆಗೆ ಭವನ ನಿರ್ಮಾಣ ಮತ್ತು ದಲಿತರಿಗೆ 50 ಮನೆಗಳ ನಿರ್ಮಾಣಕ್ಕೆ ಒಂದು ವರ್ಕಿಂಗ್ ಕಮಿಟಿ ಮತ್ತೊಂದು ನಾನ್ ವರ್ಕಿಂಗ್ ಕಮಿಟಿ ರಚನೆಯಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ. ಗ್ರಾಮದ ಜನರ ಅಭಿಪ್ರಾಯ ಪಡೆದು ಗ್ರಾಪಂ ಮತ್ತು ತಹಶೀಲ್ದಾರ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿವೇಚನೆಯಿಂದ ಯೋಚಿಸಿ. ಆಯ್ಕೆ ಪ್ರಕ್ರಿಯೆಗಳು ಪಾದರ್ಶಕವಾಗಿರುತ್ತವೆ ಎಂದರು.
ಗೊಂದಲದ ಗೂಡಾಗಿರುವ 1.30 ಗುಂಟೆ ಜಾಗ ಸರಕಾರಿ ಸೊತ್ತು. ಆ ಜಾಗದಲ್ಲಿ ಏನು ನಿರ್ಮಾಣವಾಗಬೇಕು ಎಂಬುದು ಸರಕಾರದ ತೀರ್ಮಾನವಾಗಿರುತ್ತದೆ. ದಲಿತರ ಮೇಲೆ ಕೇಸ್ ದಾಖಲಿಸಿದರೆ ಅದನ್ನು ನಾವು ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತೇವೆ. ಕೇಸ್ ದಾಖಲಿಸಿದ ತಕ್ಷಣ ಯಾರೂ ಅಪರಾಧಿಗಳಾಗುವುದಿಲ್ಲ.
ಕಾನೂನು ಎಲ್ಲರಿಗೂ ಒಂದೇ ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ಸುಳ್ಳು ಕೇಸ್ ದಾಖಲಿಸಿದರೆ ತನಿಖೆಯಲ್ಲಿ ಅದು ಬಯಲಾದರೆ ಅದು ಅವರಿಗೆ ತಿರುಗು ಬಾಣವಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ದಲಿತರ ಮೇಲೆ ದೌರ್ಜನ್ಯ ಮಾಡಿದರೆ ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಯಾರೂ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.
ತಾಪಂ ಇಓ ಚಂದ್ರಶೇಖರ್ ಮಾತನಾಡಿ, ಶಾಂತಿಯಿಂದ ದೇಶವನ್ನು ಗೆಲ್ಲಬಹುದು. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಏನು ಮಾಬೇಕು ಎಂದು ತೀರ್ಮಾಣ ಮಾಡಿ ಶಾಶ್ವತ ಕಾರ್ಯಮಾಡುತ್ತೇವೆ. ಯಾವುದೇ ಅಹಿತರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಕರ್ನಾಟಕ ಮಾದಿಗ ಸಮುದಾಯದ ಜಿಲ್ಲಾ ಅಧ್ಯಕ್ಷ ಕುಬೇರಪ್ಪ ಮಾತನಾಡಿ, ತೊರೆಸಿದ್ದಿಹಳ್ಳಿಗೆ ಮಂಜೂರಾಗಿರುವ ಲೀಡ್ಕರ್ ಚರ್ಮ ಕುಟೀರ ಭವನದ ಬಗ್ಗೆ ಮತ್ತು ಅನ್ಯ ಸಮುದಾಯ ಮತ್ತು ದಲಿತರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮದ ಹಿರಿಯ ದಲಿತ ಮುಖಂಡರಾದ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ತಿಪ್ಪೇಸ್ವಾಮಿ, ಗಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್, ಮಾಜಿ ಗ್ರಾಪಂ ಸದಸ್ಯ ತಿಮ್ಮಯ್ಯ, ಕಣಿಮಕ್ಕ, ರೆಡ್ಡಿ ಸಮುದಾಯದ ಮುಖಂಡರಾದ ಪ್ರಕಾಶ್‍ರೆಡ್ಡಿ, ರಾಮರೆಡ್ಡಿ, ಕೃಷ್ಣಾರೆಡ್ಡಿ ದಸಂಸ ಮುಖಂಡ ಮಲ್ಲೇಶ್ ಮಾತನಾಡಿ, ಎಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಹೊರಗಿನವರ ಪ್ರವೇಶದಿಂದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ರೆಡ್ಡಿಜನಾಂಗ ಮತ್ತು ದಲಿತರು ಸೌಹಾರ್ಧತೆಯಿಂದ ಬದುಕುತ್ತಿದ್ದೇವೆ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಡ್-2 ತಹಶೀಲ್ದಾರ್ ಮಂಜಾನಂದ, ಆರ್‍ಐ ಕುಬೇರ್ ನಾಯ್ಕ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಸಭೆಯಲ್ಲಿದ್ದರು.