ಸುದ್ದಿವಿಜಯ,ಜಗಳೂರು.ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಾಧನೆ ಮಾಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯ ಶಿಕ್ಷಕ ಕೆ.ಎಸ್ ರವಿಕುಮಾರ್ ಹೇಳಿದರು.
ತಾಲೂಕಿನ ಗುರುಸಿದ್ಧನಗೌಡ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾಕಾರಂಜಿ ಸ್ಪರ್ಧೆಯ ಪ್ರಶಸ್ತಿ ವಿಜೇತ ಮಕ್ಕಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನೂರಾರು ಮಕ್ಕಳಲ್ಲಿ ಒಂದೊಂದು ಪ್ರತಿಭೆಗಳು ಅಡಕವಾಗಿವೆ. ಸಾಧನೆ ಮಾಡುವ ತವಕವಿದ್ದರು ಉತ್ತಮ ಅವಕಾಶಗಳಿಲ್ಲದೇ ಕಮರಿ ಹೋಗುತ್ತವೆ. ಈಗಾಗಲೇ ಎಲ್ಲಾ ಶಾಲೆಗಳಲ್ಲೂ ಕ್ಲಸ್ಟರ್ ಮಟದ ಪ್ರತಿಭಾ ಕಾರಂಜಿಗಳು ನಡೆಯುತ್ತಿವೆ. ಇದರಲ್ಲಿ ಗೆಲುವು ಪಡೆದ ಮಕ್ಕಳು ತಾಲೂಕು ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಒಂಭತ್ತು ವಿದ್ಯಾಥಿಗಳು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ ಎಂದರು.
ಎಸ್‌ಡಿಎಂಸಿ ಸದಸ್ಯೆ ನೀಲಾಂಬಿಕೆ ಮಾತನಾಡಿ, ಶಾಲೆಯ ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಶಿಕ್ಷಕರ ಮಾರ್ಗದರ್ಶನವೇ ಇದಕ್ಕೆ ಪ್ರೇರಣೆಯಾಗಿದೆ ಎಂದರು.
ಶಿಕ್ಷಕಿ ಸಮೀರಖಾನಂ ಮಾತನಾಡಿ, ಮಕ್ಕಳು ಸ್ಪರ್ಧೆಯಲ್ಲಿ ಬಹುಮಾನ ಗಳಿಸುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭೆಯನ್ನು ಉನ್ನತ ರೀತಿಯಲ್ಲಿ ವ್ಯಕ್ತಪಡಿಸಿ ಶಾಲೆಗೆ ಕೀರ್ತಿ ತರಲಿ ಎಂದರು.
ಈ ಸಂದರ್ಭದಲ್ಲಿ ಎಸ್.ಡಿಎಂಸಿ ಸದಸ್ಯರಾದ ಕಾಟಲಿಂಗಪ್ಪ, ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ಅರ್ಚನಾ, ಪೋಷಕಿ, ಗೌರಮ್ಮ ಸೇರಿದಂತೆ ಮತ್ತಿತರಿದ್ದರು.