ಸುದ್ದಿವಿಜಯ, ಜಗಳೂರು: ಇಲ್ಲಿನ ಕೆರೆ ಅಂಗಳದಲ್ಲಿ ಸುಮಾರು 30 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿರುವ 30 ಕುಟುಂಬಗಳಿಗೆ ಇದುವರೆಗೂ ಸರಕಾರ ಸೂರು ಕಲ್ಪಿಸಿಲ್ಲ. ಮನವಿ ಮಾಡಿದರೂ ಸೊಪ್ಪು ಹಾಕದ ಅಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ ಜೋಗಪ್ಪನ ಗುಡಿ ನಿರಾಶ್ರಿತರು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಮಗೆ ನಿವೇಶನವಿಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ವೋಟರ್ ಗುರುತಿನ ಚೀಟಿ ನೀಡಿರುವ ಸರಕಾರ ನಮ್ಮನ್ನು ಮತ ಬ್ಯಾಂಕ್ ಆಗಿ ಅಷ್ಟೇ ನೋಡುತ್ತಿದೆ.
ನಾವು ಬೀದಿಯಲ್ಲಿ ಟೆಂಟ್ ಕಟ್ಟಿಕೊಂಡು ವಾಸಿಸುತ್ತೇವೆ. ಇದುವರೆಗೂ ನಮಗೆ ನಿವೇಶನವಿಲ್ಲ. ಮಳೆ, ಚಳಿ, ಬಿಸಿಲಿಗೆ ಮಕ್ಕಳು ಮರಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಮಗೆ ನಿವೇಶನ ಕಲ್ಪಿಸಿ ಎಂದು ಸಾಕಷ್ಟು ಬಾರಿ ತಹಶೀಲ್ದಾರ್, ಪಪಂ ಆಡಳಿತ ಹಾಗೂ ಶಾಸಕರಿಗೆ ಮನವಿ ಮಾಡಿದ್ದರೂ ಯಾರೂ ಸಹ ಕ್ಯಾರೇ ಅನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿ ನಮಗೆ ವೋಟ್ ಮಾಡಿ ನಿವೇಶನ ಮೂಲ ಸೌಕರ್ಯ ಕಲ್ಪಿಸುತ್ತೇವೆ ಎಂದು ಹೇಳಿ ಮತ ಪಡೆದ ಜನ ಪ್ರತಿನಿಧಿಗಳು ಇತ್ತ ಕಡೆ ತಿರುಗಿಯೂ ನೋಡುವುದಿಲ್ಲ.2015ರಲ್ಲಿ ಕೆರೆ ಅಂಗಳ ಒತ್ತುವರಿ ನೆಪದಲ್ಲಿ ಅಧಿಕಾರಿಗಳು ನಮ್ಮ ಕುಟುಂಬಗಳನ್ನು ಒಕ್ಕಲೆಬ್ಬಿಸಿದರು.
ಅಷ್ಟೇ ಅಲ್ಲ ಪರ್ಯಾಯವಾಗಿ ನಮಗೆ ಸೂರು ಕಲ್ಪಿಸುವ ಭರವಸೆ ನೀಡಿದರು. ಆದರೆ ಸರಕಾರ ಬದಲಾವಣೆಯಾಗಿದ್ದ ಕಾರಣ ಐದು ವರ್ಷ ಕಳೆದರೂ ನಾವು ಬೀದಿಯಲ್ಲೇ ವಾಸ ಮಾಡುತ್ತಿದ್ದೇವೆ.
ಇತ್ತೀಚೆಗೆ ಸುರಿದ ಮಳೆಯಿಂದ ನಿರಾಶ್ರಿತರ ಕೇಂದ್ರ ಸ್ಥಾಪಿಸಿ ಸರಕಾರ ಮೂರು ತಿಂಗಳಿಂದ ತಾತ್ಕಾಲಿಕ ಶೆಡ್ ವ್ಯವಸ್ಥೆ ಮಾಡಿದೆ. ಆದರೆ ಈಗ ಅವುಗಳನ್ನು ತೆರವುಗೊಳಿಸಿ ಎಂದು ಹೇಳಲಾಗುತ್ತಿದೆ. ಹೀಗಾದರೆ ನಾವು ನಮ್ಮ ಕುಟುಂಬದವರು ಬದುಕಲು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನೆಯಲ್ಲಿ ಮಂಜು, ತಿಮ್ಮಕ್ಕ, ಲಕ್ಷ್ಮೀ, ಚಂದ್ರು, ಶಿವಮ್ಮ, ದಾಕ್ಷಾಯಿಣಿ, ಹೊನ್ನಮ್ಮ, ಸಂತೋಷ್, ಮಹೇಶ್, ವೆಂಕಟಮ್ಮ, ಆನಂದಪ್ಪ, ಸೇರಿದಂತೆ 50ಕ್ಕೂ ಹೆಚ್ಚು ಜನರು ಪ್ರತಿಭಟಿಸಿ ಮನವಿ ಸಲ್ಲಿಸಿದರು.