ಸುದ್ದಿವಿಜಯ,ಜಗಳೂರು:ಪಡಿತರ ಅರ್ಹ ಫಲಾನುಭವಿಗಳಿಗೆ ಅಕ್ಕಿ ಬದಲಾಗಿ ಖಾತೆಗಳಿಗೆ ಹಣ ಜಮಾ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಗುರುವಾರ ತಾಲೂಕು ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ನ್ಯಾಯಬೆಲೆ ಅಂಗಡಿಗಳು ಸ್ಥಿತಿ ಶೋಚನಿಯವಾಗಿವೆ. ಉಚಿತ ಅಕ್ಕಿ ವಿತರಣೆ ಆರಂಭದಿಂದಲೂ ಇದನ್ನೇ ನಂಬಿಕೊಂಡು ಜೀವಿಸುವವರ ಬದುಕು ಸಂಕಷ್ಟಕ್ಕೆ ತಲುಪಿದೆ.
ರಾಜ್ಯ ಸರಕಾರ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಇದೀಗ ಐದು ಕೆಜಿ ಮಾತ್ರ ಕೊಟ್ಟು ಉಳಿದ ಐದು ಕೆಜಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಆದೇಶವನ್ನು ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಐದು ಕೆಜಿ ಅಕ್ಕಿಗೆ ಕೊಡುವ ಕಮಿಷನ್ ನಿಂದ ಅಂಗಡಿ ನಡೆಸುವುದು ಸುಲಭವಿಲ್ಲ. ಸರಕಾರ ಈ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗದುಕೊಳ್ಳಬೇಕು.
ಪಡಿತರ ವಿತರಕರ ಸಂಘಕ್ಕೆ ಬೆನ್ನೆಲುಬಾಗಿ ನಿಂತುಕೊಂಡು ಸಮಸ್ಯೆಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ವಿತರಕರ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಹಿತ ಕಾಪಾಡಬೇಕೆಂದು ರಾಜ್ಯದಲ್ಲಿ ಬಯೋಮೆಟ್ರಿಕ್ ಪದ್ದತಿಯಿಂದಾಗಿ ಪಡಿತರ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.
ಪ್ರಮುಖವಾಗಿ ಸರ್ವರ್ ಸಮಸ್ಯೆ ಇದ್ದು, ಹಲವಾರು ಬಾರಿ ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಹಿನ್ನಲೆಯಲ್ಲಿ ಈ ಪದ್ದತಿಯನ್ನು ರದ್ದುಪಡಿಸಿ ಈ ಹಿಂದಿನಂತೆ ಓಟಿಪಿ ಅಥವಾ ಚೆಕ್‌ಲಿಸ್ಟ್ ಪದ್ದತಿಯನ್ನು ಜಾರಿಗೊಳಿಸಬೇಕು ಎಂದರು.
ಕೇರಳ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಪಡಿತರ ವಿತರಕರಿಗೆ ಹೆಚ್ಚಿನ ಕಮಿಷನ್ ನೀಡಲಾಗುತ್ತಿದ್ದು, ಅಲ್ಲದೆ ಪಡಿತರ ವಿತರಣೆಯೊಂದಿಗೆ ದಿನ ಬಳಕೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ.
ಇದೆ ಮಾದರಿಯಲ್ಲಿ ರಾಜ್ಯದಲ್ಲೂ ಅವಕಾಶ ಕಲ್ಪಿಸಿಕೊಡಬೇಕು. ಕಳೆದ ಸರ್ಕಾರ ವಿತರಕರಿಗೆ ನಿಗದಿತ ಸಮಯದಲ್ಲಿ ಕಮಿಷನ್ ಹಣ ಜಮಾ ಮಾಡದೆ ಬಾಕಿ ಉಳಿಸಿಕೊಂಡಿದೆ.
ಕೊರೋನಾ ಸಂಕಷ್ಟದ ಸಮಯದಲ್ಲೂ ವಿತರಕರು ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ತಕ್ಷಣ ಕಮಿಷನ್ ಬಾಕಿ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ಗೌರವಾಧ್ಯಕ್ಷ ಎಚ್. ರುದ್ರಮುನಿ, ಅಧ್ಯಕ್ಷ ಎಂ.ಡಿ ರಸೂಲ್, ಉಪಾಧ್ಯಕ್ಷ ಆರ್.ಬಿ ಬಸವರಾಜ್, ಪದಾಧಿಕಾರಿಗಳಾದ ಯಲ್ಲಪ್ಪ, ಕೆ. ಹನುಮಂತಪ್ಪ, ಎಂ.ಆರ್ ಪುಟ್ಟಣ್ಣ, ಎಲ್.ಬಿ ಚಂದ್ರಶೇಖರಪ್ಪ, ಜಿ. ಸಿದ್ದಪ್ಪ, ಅಡಿವಪ್ಪ ಸೇರಿದಂತೆ ಮತ್ತಿತರಿದ್ದರು.