‘ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕಾದರೆ ಎ.ಟಿ.ನಾಗರಾಜ್‍ನನ್ನು ಗಲ್ಲಿಗೇರಿಸಬೇಕು’!

Suddivijaya
Suddivijaya January 14, 2023
Updated 2023/01/14 at 1:51 PM

ಸುದ್ದಿವಿಜಯ, ಜಗಳೂರು: (ಸಂದರ್ಶನ)ಆರ್ ಟಿಐ ಕಾರ್ಯಕರ್ತ ಗೌರಿಪುರ ರಾಮಕೃಷ್ಣ ಕೊಲೆ ಆಗಿ ಇಂದಿಗೆ (ಶನಿವಾರ ಸಂಜೆ 6.30ಕ್ಕೆ)ಎಂಟು ದಿನಗಳೇ ಕಳೆದವು. ಕೊಲೆ ಮಾಡಿಸಿ ಆರೋಪದ ಮೇಲೆ ಪಿಡಿಒ ಎ.ಟಿ.ನಾಗರಾಜ್ ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಕೊಲೆಯಾದ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ. ಮನೆಯಲ್ಲಿ ಸೂತಕದ ಕಾರ್ಮೋಡ ಕವಿದಿದೆ!

ಹೌದು, ಮಗನನ್ನು ಪ್ರೀತಿಸುತ್ತಿದ್ದ ತಂದೆ ಪ್ರಕಾಶ್ ತಾಯಿ ಬೊಮ್ಮಕ್ಕ ಮತ್ತು ಕುಟುಂಬದ ಅನೇಕ ಸದಸ್ಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಗೌರಿಪುರದ ರಾಮಕೃಷ್ಣ ಅವರ ಮನೆಯ ಮುಂದಿರುವ ಕಣದ ಜಾಗದಲ್ಲೇ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ತಂದೆ ಪ್ರಕಾಶ್ ತಾಯಿ ಬೊಮ್ಮಕ್ಕ ನೋವಿನ ನುಡಿಗಳು 
ತಂದೆ ಪ್ರಕಾಶ್ ತಾಯಿ ಬೊಮ್ಮಕ್ಕ ನೋವಿನ ನುಡಿಗಳು 

ಈ ಕೊಲೆಗೆ ಕಾರಣರಾದ ಗೌರಿಪುರದ ಪಿಡಿಓ ಎ.ಟಿ.ನಾಗರಾಜ್ ಪೊಲೀಸರಿಗೆ ಸರೆಂಡರ್ ಆಗಿದ್ದಾನೆ. ಆದರೆ ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಕ್ಯಾಸೇನಹಳ್ಳಿ ಗ್ರಾಪಂ ನಲ್ಲಿ ನರೇಗಾದಲ್ಲಿ ನಡೆದಿರುವ ಭ್ರಷ್ಟಾಚಾರ. ಮನರೇಗಾದಲ್ಲಿ ನಡೆದಿರುವ ಕೋಟಿ ಕೋಟಿ ರೂ ಭ್ರಷ್ಟಾಚಾರದ ಬಗ್ಗೆ ರಾಮಕೃಷ್ಣ ಮತ್ತು ಅವರ ಕುಟುಂಬ ಸಿಡಿದೆದ್ದಿತ್ತು.

ಸುದ್ದಿವಿಜಯ ವೆಬ್ ನ್ಯೂಸ್ ಗೌರಿಪುರದ ಅವರ ಮನೆಗೆ ಭೇಟಿ ಕೊಟ್ಟಾಗ ಆಕ್ರಂದ ಮುಗಿಲು ಮುಟ್ಟಿತ್ತು. ಅವರ ತಂದೆ ಪ್ರಕಾಶ್ ಅವರನ್ನು ಮಾತನಾಡಿಸಿದಾಗ ಎ.ಟಿ.ನಾಗರಾಜ್ ಅವರ ಭ್ರಷ್ಟಾಚಾರದ ನಗ್ನ ಸತ್ಯಗಳ ಅನಾವರಣಗೊಂಡವು.

ಸಂದರ್ಶನ 

ಪ್ರಶ್ನೆ: ನಿಮ್ಮ ಮಗನ ಸಾವಿಗೆ ಕಾರಣ ಯಾರು?
 ಪ್ರಕಾಶ್: ನನ್ನ ಮಗನನ್ನು ಮೋಸದಲ್ಲಿ ಕೊಂದರು. ನರೇಗಾದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಎತ್ತಿಹಿಡಿದ ಕಾರಣಕ್ಕೆ ನನ್ನ ಮಗ ಮಣ್ಣಾದ. ಹುಲಿಯಂತೆ ಇದ್ದವನನ್ನು ಮೋಸದಿಂದ ಕೊಂದರು. ಇದಕ್ಕೆ ನೇರಕಾರಣ ಪಿಡಿಒ ಎ.ಟಿ. ನಾಗರಾಜ್. ಕ್ಯಾಸೇನಹಳ್ಳಿ ಗ್ರಾಪಂ ನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಆರ್‍ಟಿಐ ಮೂಲಕ ಮಾಹಿತಿ ಕೇಳಿದ್ದ. ಅದಕ್ಕೆ ನನ್ನ ಮಗನನ್ನು ಟಾರ್ಗೆಟ್ ಮಾಡಿದ ಎಟಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಮೋಸದಿಂದ ಕರೆದೊಯ್ದು ಡಾಬಾವೋಂದರಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ಕೊಂದರು.

ಪ್ರಶ್ನೆ: ಪಿಡಿಓ ಎ.ಟಿ.ನಾಗರಾಜ್ ವಿರುದ್ಧ ರಾಮಕೃಷ್ಣ ಸಿಡಿದೇಳಲು ಕಾರಣ?

ಪ್ರಕಾಶ್: ಕ್ಯಾಸೇನಹಳ್ಳಿ ಗ್ರಾಪಂ ನಲ್ಲಿ ಯಾವುದೇ ಕಾಮಗಾರಿ ಮಾಡದೇ ಕೋಟಿ ಕೋಟಿ ಹಣ ಡ್ರಾಮಾಡಿಕೊಂಡು ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಈ ಹಿಂದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಎ.ಟಿ.ನಾಗರಾಜ್ ಸಸ್ಪೆಂಡ್ ಆಗಲು ನನ್ನ ಮಗ ಹೋರಾಟ ನಡೆಸಿದ್ದ. ದಾಖಲೆ ಕೇಳಿದ್ದ. ಇಲ್ಲಿರುವ ಪಿಡಿಓ ಕೇವಲ ನೆಪಮಾತ್ರಕ್ಕೆ ಕಾರ್ಯನಿರ್ವಹಿಸುತ್ತಾರೆ. ಎಲ್ಲಾ ಬೋಗಸ್ ದಾಖಲೆ ರೆಡಿ ಮಾಡ್ತಿದ್ದವನು ಎ.ಟಿ.ನಾಗರಾಜ್. ಅದಕ್ಕೆ ಇಲ್ಲಿದ್ದ ಪಿಡಿಓ ಬಸವರಾಜಯ್ಯ ಕೇವಲ ಸಹಿ ಹಾಕುತ್ತಿದ್ದರು. ಇಷ್ಟು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿದ್ದ. ಅವರು ಸಸ್ಪೆಂಡ್ ಆದರೂ ಎ.ಟಿ.ನಾಗರಾಜ್ ಸಸ್ಪೆಂಡ್ ಆದ. ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕೆ ಇವರು ನನ್ನನ್ನು ಬಿಡಲ್ಲ ಎಂದು ಮೋಸದಿಂದ ಮುಗಿಸಿದರು.

ಪ್ರಶ್ನೆ: ಎ.ಟಿ.ನಾಗರಾಜ್ ಭ್ರಷ್ಟಾಚಾರ ಮಟ್ಟ ಹಾಕಲು ನಿಮ್ಮ ಮಗ ಯಾವ ರೀತಿ ಹೋರಾಡುತ್ತಿದ್ದರು?
ಪ್ರಕಾಶ್:  ಬ್ಯಾಂಕ್‍ನಿಂದ ಕೋಟಿ ಕೋಟಿ ಹಣ ಬಿಡಿಸುತ್ತಿದ್ದ. ಅದು ಹೇಗೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದರು. ಅದು ಅಷ್ಟು ಸುಲಭವೇ ಎನ್ನುತ್ತಿದ್ದೆ. ಆದರೆ ಅವರ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಮಿತಿ ಮೀರಿತ್ತು ಅಂದರೆ ಗೋಣಿಚೀಲದಲ್ಲಿ ಹಣ ತರುತ್ತಿದ್ದ ಎಂದು ತಿಳಿದು ಬಂತು. ಸರಕಾರದ ಹಣ ಇಷ್ಟರ ಮಟ್ಟಿಗೆ ದುರ್ಬಳಕೆಯಾಗುತ್ತಿದೆ ಎಂದು ನನ್ನ ಮಗ ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದ್ದ. ರಾಮಕೃಷ್ಣನಿಂದ ನಮಗೆ ಸಮಸ್ಯೆ ತಪ್ಪಿದ್ದಲ್ಲ ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದನನ್ನ ಮಗನನ್ನು ಕುಮಾರ ಎಂಬ ಹುಡುಗ ಉಪಾಯದಿಂದ ಕರೆದೊಯ್ದು ಊಟ ಮಾಡುವಾಗಲೇ ಕಲ್ಲಿನಿಂದ ತಲೆಗೆ ಹೊಡೆದು ಕೊಂದರು. ನನ್ನ ಮಗನಿಗೆ ಕಾನೂನು ಪ್ರಕಾರ ನ್ಯಾಯ ಸಿಗಬೇಕು. ಎ.ಟಿ.ನಾಗರಾಜ್ ಸೇರಿ 11 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು ಕಾನೂನು ವ್ಯಾಪ್ತಿಯಲ್ಲಿ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ.

ಪ್ರಶ್ನೆ: ಈ ಕೊಲೆಯ ಹಿಂದಿನ ಮೂಲಾಧಾರ ಯಾರು?

ಪ್ರಕಾಶ್: ಎಟಿ ನಾಗರಾಜ್ ಕಾರ್ಯನಿರ್ವಹಿಸಿದ ಅಣಬೂರು, ಹನುಮಂತಾಪುರ, ಗುರುಸಿದ್ದಾಪುರ, ಚಿಕ್ಕಮಲ್ಲನಹೊಳೆ, ಗ್ರಾಪಂಗಳಲ್ಲಿ ಮೂಟೆ ಮೂಟೆ ಹಣ ಕೊಳ್ಳೆ ಹೊಡೆದಿದ್ದಾನೆ. ಅವನ ಭ್ರಷ್ಟಾಷಾರದ ಸಾಮ್ರಾಜ್ಯ ನೀವೇ ಹೋಗಿ ನೋಡಿ. ಆತ ದುಡಿದು ಕಟ್ಟಲು ಅಸಾಧ್ಯ. ಅವರದ್ದು ಕೇವಲ ಏಳು ಎಕರೆ ಜಮೀನು ಇತ್ತು. ಇವತ್ತು 22 ಎಕರೆ ತೋಟ, ಕುರಿ ಫಾರ್ಮ್, ಕೋಳಿ ಫಾರ್ಮ್, ದೊಡ್ಡ ಮನೆ ಅಷ್ಟೇ ಅಲ್ಲ ಬೇರೆ ಬೇರೆ ಕಡೆಗಳಲ್ಲಿ ಮಾಡಿರುವ ಆಸ್ತಿಗಳು ಲೆಕ್ಕವೇ ಇಲ್ಲ. ಅದು ಭ್ರಷ್ಟಾಚಾರದ ಹಣದಿಂದ ಕಟ್ಟಿಕೊಂಡ ಸಾಮ್ರಾಜ್ಯ. ಅದು ತನಿಖೆಯಾಗಬೇಕು. ಎಂಎಲ್‍ಎ, ಎಂಪಿಗಳು ಕಟ್ಟಲು ಸಾಧ್ಯವಾಗದಂತಹ ಸಾಮ್ರಾನ್ಯ ಕಟ್ಟಿದ್ದಾನೆ. ನಾಲ್ಕಾರು ಕಾರುಗಳಲ್ಲಿ ಓಡಾಡುತ್ತಿದ್ದ. ಇದಕ್ಕೆಲ್ಲ ಭ್ರಷ್ಟಾಚಾರ ಕಾರಣ. ಬೋಗಸ್ ಬಿಲ್ ಸೃಷ್ಟಿಸಿದ್ದಾನೆ. ಸರಕಾರ ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

ಪ್ರಶ್ನೆ: ಎ.ಟಿ.ಕೋಟಿ ಕೋಟಿ ರೂ ಲೂಟಿ ಮಾಡಿದ್ದು ಹೇಗೆ?

ಪ್ರಕಾಶ್: ಅವನ ಬಳಿ 1500 ಬೋಗಸ್ ಜಾಬ್ ಕಾರ್ಡ್‍ಗಳಿವೆ. ನಮ್ಮ ಊರಿನಲ್ಲಿ ಮುಸ್ಲೀಮರಿಲ್ಲ, ಲಂಬಾಣಿ ಜನಾಂಗದವರಿಲ್ಲ. ಮುಸ್ಲೀಂ, ಲಂಬಾಣಿ ಜನಾಂಗದವರ ಹೆಸರಿನಲ್ಲಿ ಯಾರದ್ದೋ ಫೋಟೋ ಯಾವುದೋ ಹೆಸರಿಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ಗೋಣಿ ಚೀಲದಲ್ಲಿ ಹಣ ತರುತ್ತಿದ್ದ. ಉದ್ಯೋಗ ಖಾತರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮೇಲಧಿಕಾರಿಗಳು ಇನ್ವೆಸ್ಟಿಗೇಷನ್ ಬಂದಾಗ ಅವನು ಸೃಷ್ಟಿಸಿದ್ದ ಬೋಗಸ್ ಕಾರ್ಡ್‍ಗಳ ಬಗ್ಗೆ ಅಧಿಕಾರಿಗಳು ಕೇಳಿದ್ದರು. ನಮ್ಮ ಊರಿನಲ್ಲಿ ಮುಸ್ಲೀಂ, ಲಂಬಾಣಿ ಜನಾಂಗದವರಿಲ್ಲ ಎಂದು ಹೇಳಿದ್ದೆವು. ಇದು ಸಂಪೂರ್ಣ ತನಿಖೆಯಾಗಲಿ.

ಪ್ರಶ್ನೆ: ಕೊಲೆಯಿಂದೆ ಪ್ರಭಾವಿಗಳ ಕೈವಾಡ ಇದೆಯೇ?

ಪ್ರಕಾಶ್: ನನ್ನ ಮಗನ ಕೊಲೆಯ ಹಿಂದೆ ಯಾವ ರಾಜಕಾರಣಿಗಳ ಕೈವಾಡವೂ ಇಲ್ಲ. ಅದೆಲ್ಲ ಸುಳ್ಳು. ಇದಕ್ಕೆಲ್ಲ ಎ.ಟಿ.ನಾಗರಾಜ್ ಮತ್ತು ಅವನ ಸಹಚರರೇ ನೇರ ಕಾರಣ. ನಿಸ್ಪಕ್ಷಪಾತ ತನಿಖೆಯಾಗಲಿ. ಅವರನ ಬ್ರಹ್ಮಾಂಡ ಭ್ರಷ್ಟಾಚಾರ ಜಗಕ್ಕೆಲ್ಲಾ ಗೊತ್ತಾಗಲಿ.

ಪ್ರಶ್ನೆ: ಕೊಲೆ ಮಾಡಲು ಅವರಿಗೆ ಧೈರ್ಯ ಹೇಗೆ ಬಂದಿರಬಹುದು?

 ಪ್ರಕಾಶ್: ಕೋಟಿ ಕೋಟಿ ಹಣ ಬಂದ ಮೇಲೆ ಎ.ಟಿ.ನಾಗರಾಜ್ ಮತ್ತು ಅವನ ತಮ್ಮ ಎ.ಟಿ.ಪ್ರಭುಗೆ ಹಣದ ಮದ ತಲೆಗೇರಿತು. ಹಣದಿಂದ ಜನರನ್ನು ಗಳಿಸಿಕೊಂಡ. ಅವನ ಅನುಯಾಯಿಗಳಿಗೆ ಲಕ್ಷ ಅಲಕ್ಷ್ಯವಾಗಿತ್ತು. ಅವರ ಅನುಯಾಯಿಗಳು ಎನ್‍ಆರ್‍ಇಜಿಯಲ್ಲಿ ವೆಂಡರ್ ಆಗಿದ್ದರು. ಅವರ ಕಚೇರಿಗಳು ಉಜ್ಜಿನಿ, ಕೊಟ್ಟೂರು ಬೇರೆ ಬೇರೆ ಆಫೀಸ್ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. 15ರಿಂದ 20 ಯುವಕರನ್ನು ಕೆಲಸಕ್ಕೆ ಇಟ್ಟುಕೊಂಡು ಬೋಗಸ್ ದಾಖಲೆ ಸೃಷ್ಟಿಸಿದ್ದಾನೆ. ಅವರಿಗೆ ತಿಂಗಳಿಗೆ ವೇತನ ನೀಡಿ ಸಾಕಿದ್ದ. ನಮಗೆ ನ್ಯಾಯ ಸಿಗಬೇಕಾದರೆ ಎ.ಟಿ.ನಾಗರಾಜ್ ಕೆಲಸಕ್ಕೆ ಸೇರಿದಾಗಿನಿಂದ ಇಲ್ಲಿಯವರೆಗೂ ನಡೆದಿರುವ ಭ್ರಷ್ಟಾಚಾರ ಬಯಲಾಗಿ ಕಾನೂನು ರೀತಿ ಶಿಕ್ಷೆಯಾಗಬೇಕು. ಅವನನ್ನು ಗಲ್ಲಿಗೇರಿಸಬೇಕು. ಆಗ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುತ್ತದೆ.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!