ಸುದ್ದಿವಿಜಯ,ಜಗಳೂರು: ಆದಿಜಾಂಬವ ಸಮಾಜ ಉದ್ದಾರವಾಗಬೇಕಾದರೆ ಶಿಕ್ಷಣ ತುಂಬ ಅವಶ್ಯಕವಾಗಿದೆ. ಅಂದು ಡಾ.ಬಿ. ಆರ್ ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಭಾರತ ಸಂವಿಧಾನ ಬರೆಯದಿದ್ದರೆ ಮಾದಿಗ ಸಮಾಜದ ಬದುಕು ಅದೋಗತಿಗೆ ಹೋಗುತ್ತಿತ್ತು.ಬಾಬಾ ಸಾಹೇಬರು ಹೇಳಿಕೊಟ್ಟ ಮಾರ್ಗಗಳಲ್ಲಿ ನಡೆದ ಅವರ ಗೌರವವನ್ನು ಎತ್ತಿಯುವ ಹಿಡಿಯುವ ಶಕ್ತಿ ಯುವಕರಲಿ ಎಂದು ಹಿರಿಯೂರು ಅದಿಜಾಂಬವ ಪೀಠದ ಷಡಕ್ಷರ ಮುನಿ ಸ್ವಾಮಿ ಕಿವಿಮಾತು ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಆದಿ ಜಾಂಬವ ಮಾದಿಗ ಸಮಾಜದಿಂದ ಆಯೋಜಿಸಿದ್ದ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಪಂ, ಪಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಕಾ.ನಿ.ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವಂತರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ.ಜಗಳೂರು ಕ್ಷೇತ್ರದಲ್ಲಿ ಮಾದಿಗ ಸಮಾಜ 40 ಸಾವಿರ ಜನಸಂಖ್ಯೆ ಹೊಂದಿದೆ, ಆದರೆ ತಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ಯಾವುದೇ ಕೆಲಸಗಳು ಯಶಸ್ವಿಯಾಗುತ್ತಿಲ್ಲ, ಒಮ್ಮೆ ಒಂದಾಗಿ ಸಮಾಜದ ಅಭಿವೃದ್ದಿ ಒತ್ತು ಕೊಡಿ, ಅಧಿಕಾರ ತಾನಾಗಿಯೇ ಬರುತ್ತದೆ ಎಂದು ಸಲಹೆ ನೀಡಿದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಜಗಳೂರು ಬರಪೀಡಿತ ತಾಲೂಕಾಗಿರಬಹುದು, ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕ್ರಾಂತಿ ಮಾಡಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸತತ ಮೂರನೇ ಬಾರಿಯೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ. ವಿದ್ಯಾರ್ಥಿಗಳು ಐಎಎಸ್,ಕೆಎಎಸ್ ಪರೀಕ್ಷೆಗಳಲ್ಲಿ ಪಾಸಾಗಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 114 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಗಳಂತೆ ಪ್ರೋತ್ಸಹ ಧನ ನೀಡಿದರು.
ಈ ಸಂದರ್ಭದಲ್ಲಿ ಆದಿ ಜಾಂಬವ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಿಪ್ಪೇಸ್ವಾಮಿ, ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಬಿಜೆಪಿ ಮುಖಂಡ ಬಿಸ್ತುವಳ್ಳಿಬಾಬು, ಹಿರಿಯ ಮುಖಂಡರಾದ ಜಿ.ಎಚ್ ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಗ್ಯಾಸ್ ಓಬಣ್ಣ, ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ, ವಕೀಲ ಹನುಮಂತಪ್ಪ, ಚಂದ್ರಪ್ಪ, ಕುಬೇಂದ್ರಪ್ಪ, ಮುಸ್ಟೂರು ಗ್ರಾ.ಪಂ ಅಧ್ಯಕ್ಷೆ ಶೃತಿ, ಪ.ಪಂ ಸದಸ್ಯರಾದ ದೇವರಾಜ್ ನಿರ್ಮಲಕುಮಾರಿ ಸೇರಿದಂತೆ ಮತ್ತಿತರಿದ್ದರು.