ಸುದ್ದಿವಿಜಯ, ಜಗಳೂರು: ಚಿತ್ರದುರ್ಗ ಜಿಲ್ಲೆಯಿಂದ 1997ರಲ್ಲಿ ಜಗಳೂರು ವಿಭಜನೆಯಾಗಿ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದರೂ ಸಹ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಚಾರದಲ್ಲಿ ಹೋರಾಟಗಾರರು ನಮ್ಮ ತಾಲೂಕಿನ ಜನತೆಗೆ ನೀರಿನ ನ್ಯಾಯ ಕೊಡಿಸುವ ವಿಚಾರದಲ್ಲಿ ನಮ್ಮೆಲ್ಲರ ಜತೆ ಕೈ ಜೋಡಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಸಂತೋಷ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಗಳೂರು ಗಡಿ ಗ್ರಾಮ ಸಂಗೇನಹಳ್ಳಿಯ ಐತಿಹಾಸಿಕ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಮುಖಂಡರ ಜೊತೆ ಶುಕ್ರವಾರ ಬಾಗೀನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗಳೂರು ತಾಲೂಕಿನ ಜನರು ಅದೃಷ್ಟವಂತರು. ಒಂದೆಡೆ ಅಪ್ಪರ್ ಭದ್ರಾ ಯೋಜನೆ ಮತ್ತೊಂದೆಡೆ 57 ಕೆರೆ ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆಗಳು ತಾಲೂಕನ್ನು ಸಮೃದ್ಧವಾಗಿಸಲು ಸಹಕಾರಿಯಾಗಲಿವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 57ಕೆರೆ ತುಂಬಿಸಲು 660 ಕೋಟಿ ಹಣ ನೀಡಿದ್ದರು. ನಾನು ಶಾಸಕನಾಗಿದ್ದಾಗ ಈ ಯೋಜನೆಗೆ ಚಾಲನೆ ಘೋಷಣೆಯಾಗಿದ್ದು ಅಂತ್ಯಂತ ಸಂತೋಷದ ವಿಷಯ ಎಂದರು.
ಅವರು ಬೆಳಗಟ್ಟ, ಕಾತ್ರಾಳ್ ಮತ್ತು ಸಂಗೇನಹಳ್ಳಿ ಕೆರೆಗಳ ಮೂಲಕ ನೀರು ಹರಿಸುವ ಬಗ್ಗೆ ಪ್ಲಾನಿಂಗ್ ನೀಡಿದ್ದರು. ಆದರೆ ಈಗಲೂ ಸಹ ಯಾವ ಮಾರ್ಗದ ಮೂಲಕ ನೀರು ಹರಿಯುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟ ಜಗಳೂರಿಗೆ ಸೀಮಿತ ವಿಷಾದ: ಅಪ್ಪರ್ ಭದ್ರಾ ಯೋಜನೆ ಜಾರಿಗಾಗಿ ಚಿತ್ರದುರ್ಗ ಜಿಲ್ಲೆಯ ಅನೇಕ ಹೋರಾಟಗಾರರು ನಮ್ಮ ಜೊತೆಗಿದ್ದಾರೆ. ಆದರೆ ನಾವು ಭದ್ರಾ ಮೇಲ್ದಂಡೆ ಯೋಜನೆಗಾಗಿ 100 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದೆವು. ಆದರೆ ನಮ್ಮ ಹೋರಾಟ ಕೇವಲ ಜಗಳೂರಿಗೆ ಸೀಮಿತವಾಗಿತ್ತು.
ಆದರೆ ನಮ್ಮನ್ನು ಚಿತ್ರದುರ್ಗದ ಹೋರಾಟಗಾರರು ಮರೆಯದೇ ನಮ್ಮ ಜೊತೆ ಸಾಥ್ ನೀಡಿದರು. ನಾವು ನಿಮ್ಮ ಜೊತೆ ಸೇರಲೇ ಇಲ್ಲ ಎಂಬುದೇ ನೋವಿನ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ. ಆದರೆ ನೀರು ಬರುವವರೆಗೂ ನಮ್ಮ ಹೋರಾಟ ನಿರಂತರವಾಗಿರಬೇಕು. ಅದಕ್ಕಾಗಿ ಚೀಫ್ ಎಂಜಿನಿಯರ್ ಜೊತೆ ನಿರಂತರವಾಗಿ ಸಭೆಗಳನ್ನು ನಡೆಸಬೇಕು. ಯಾವ ರೀತಿ ಹನಿ ನೀರಾವರಿ ಯೋಜನೆ ಜಾರಿಯಾಗುತ್ತದೆ ಎಂಬುದರ ಬಗ್ಗೆ ಸುದೀರ್ಘ ಚರ್ಚೆ ಅಗತ್ಯವಿದೆ. ಎಲ್ಲರೂ ಒಟ್ಟಿಗೆ ಯೋಜನೆ ಫಲಪ್ರದಕ್ಕಾಗಿ ಹೋರಾಡೋಣ ಎಂದು ಕರೆ ನೀಡಿದರು.
ಅಪ್ಪರ್ ಭದ್ರಾದಿಂದ ಲಾಭ:
ಭದ್ರಾಮೇಲ್ದಂಡೆ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು ಜನತೆಗೆ ನೀರು ತರುವುದು 25 ವರ್ಷಗಳ ಹೋರಾಟ ಶ್ರಮವಾಗಿದೆ. ಎಲ್ಲಿ ನೋಡಿದರೂ ಅಡಕೆ ನಾಟಿ ಮಾಡುತ್ತಿರೋದು ಸಂತೋಷವಾಗುತ್ತಿದೆ. ಜಗಳೂರು ಜನತೆ ಅದೃಷ್ಟ ವಂತರು. ಎರಡು ಮಾರ್ಗಗಳಿಂದ ನೀರು ಬರುತ್ತಿದೆ. ಅಪ್ಪರ್ ಭದ್ರಾವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವುದಷ್ಟೇ ಬಾಕಿ ಇದ್ದು ಶೀಘ್ರವಾಗಿ ಯೋಜನೆ ಅನುಷ್ಠಾನವಾಗಲಿದೆ. ಇದರಿಂದ ಈ ಭಾಗದ ಜನರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದರು.
ವಿಳಂಬವಾದಷ್ಟು ಯೋಜನಾ ವೆಚ್ಚ ಜಾಸ್ತಿ!
ಪತ್ರಕರ್ತ ಹಾಗೂ ಹೋರಾಟಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಜೆ.ಎಚ್. ಪಟೇಲ್ ಸಿಎಂ ಆದಾಗ ಈ ಯೋಜನೆ ಚುರುರು ಪಡೆಯಿತು. ಜಗಳೂರಿನ ಒಂಭತ್ತು ಕೆರೆಗಳಿಗೆ 2.4 ಟಿಎಂಸಿ ಅಡಿ ನೀರು ಸೇರಲಿದೆ. ಈಗಾಗಲೇ ಯೋಜನೆಯ ರೂಪುರೇಷೆ ಕಾರ್ಯ ಆರಂಭವಾಗಿದೆ. ನೀರು ಬರಬೇಕಾದರೆ ಪ್ರತಿಯೊಬ್ಬರ ಹೋರಾಟದಲ್ಲಿ ಭಾಗವಹಿಸುವುದು ಅತ್ಯವಶ್ಯಕ. ಕೇವಲ ಹೋರಾಟಗಾರರಿಂದ ಅಸಾಧ್ಯ. ಎಲ್ಲರೂ ಹೋರಾಟದಲ್ಲಿ ಭಾಗ ವಹಿಸಬೇಕು. 2012 ರಲ್ಲಿ 13 ಸಾವಿರ ಕೋಟಿ ರೂ ಇದ್ದ ಯೋಜನೆ ಪ್ರಸ್ತುತ 23 ಸಾವಿರ ಕೋಟಿ ರೂ.ಗೆ ವಿಸ್ತಾರವಾಗಿದೆ.
ವಿಳಂಬವಾದಷ್ಟು ಯೋಜನಾ ವೆಚ್ಚ ಹೆಚ್ಚಾಗಲಿದೆ. ಹೀಗಾಗಿ ಆದಷ್ಟು ತ್ವರಿತವಾಗಿ ಯೋಜನೆ ಪೂರ್ಣಗೊಳ್ಳಬೇಕಾದರೆ ಜಗಳೂರು ಜನತೆ ಭದ್ರಾ ಮೇಲ್ದಂಡೆ ಹೋರಾಟಕ್ಕೆ ಕೈಜೋಡಿಸಬೇಕು. ಬದ್ಧತೆಯಿಂದ ಹೋರಾಟಕ್ಕೆ ಪ್ರತಿಜ್ಞೆ ಮಾಡಿ ಎಂದರು.
ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ನುಲೇನೂರು ಶಂಕರಪ್ಪ, ಪತ್ರಕರ್ತರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದರಿಂದ ಈ ಯೋಜನೆ ಅನುಷ್ಠಾನಕ್ಕೆ ಅನುಕೂಲವಾಯಿತು. ಮಗು ಅತ್ತರೆ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ.ಅದೇ ರೀತಿ ಜನರು ಹೋರಾಟ ಮಾಡಿದಷ್ಟೇ ಯೋಜನೆ ಅನುಷ್ಠಾನವಾಗುತ್ತದೆ. ಅಬ್ಬಿನಹೊಳೆಯ ಹತ್ತಿರ ಭೂ ಸ್ವಾದೀನ ಪ್ರಕ್ರಿಯೆ ನಿಂತು ಹೋಗಿದ್ದು ಆದಷ್ಟು ಬೇಗ ಆ ಕಾರ್ಯವಾಗಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಹೋರಾಗಾರ ಯಾದವರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತೇಹಳ್ಳಿ ಸುರೇಶ್ ಬಾಬು ಸಂಗೇನಹಳ್ಳಿ ಗ್ರಾಮದ ಡಾ. ಅಶೋಕ್ ಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಹೋರಾಟದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲ್ಲೇದೇವರ ಪುರ ಗ್ರಾಪಂ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿಯ ದಯಾನಂದ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಚಿತ್ರದುರ್ಗದ ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಿ.ತಿಪ್ಪೇಸ್ವಾಮಿ, ಕೆ.ಆರ್.ದಯಾನಂದ, ತೋರಣಗಟ್ಟೆ ಗ್ರಾಮದ ಪೆÇ್ರ.ಜಿ.ಎ.ಚಂದ್ರಶೇಖರ್, ಗ್ರಾಪಂ ಸದಸ್ಯ ಚನ್ನಕೇಶವ, ಓಬಣ್ಣ, ಪ್ರಕಾಶ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.