ಸುದ್ದಿವಿಜಯ, ಜಗಳೂರು: ಬಯಲು ಸೀಮೆ ರೈತರ ಜೀವ ನಾಡಿಯಾಗಿರುವ ಅಪ್ಪರ್ ಭದ್ರಾ ಯೋಜನೆ 15 ವರ್ಷಗಳಾದರೂ ಬರದ ನಾಡು ಜಗಳೂರು ಹರಿಯದೇ ಇರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಭದ್ರ ಮೇಲ್ದಂಡೆ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಳಂಬ ಸಂಬಂಧ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರಬರೆದಿರುವ ಅವರು, 2024ನೇ ಸಾಲಿನೊಳಗೆ ಸಂಪೂರ್ಣ ಪ್ರದೇಶಕ್ಕೆ ನೀರು ಹರಿಸಲು ಕಾಲ ಮಿತಿ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಗಿ ಇಂದಿಗೆ (ಸೋಮವಾರ) 15 ವರ್ಷಗಳಾದವು. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಕನಿಷ್ಠ ಮುಖ್ಯ ಕಾಲುವೆಯೂ ಸಹ ಸಂಪೂರ್ಣಗೊಂಡಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಯೋಜನೆಯ ವಿಳಂಬಕ್ಕೆ ಸರಕಾರದ ಇಚ್ಛಾಶಕ್ತಿಯ ಕೊರತೆಯೋ ಅಥವಾ ಇಲಾಖೆಯ ನಿರ್ಲಕ್ಷ್ಯವೋ ತಿಳಿಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಾಣಿವಿಲಾಸ ಸಾಗರ ಅಣೆಕಟ್ಟೆ 1898ರಲ್ಲಿ ಆರಂಭವಾಗಿ 1907ರಲ್ಲಿ ಪೂರ್ಣಗೊಂಡಿತ್ತು ಎಂದು ದಾಖಲೆಗಳು ಹೇಳುತ್ತವೆ. ಸುಮಾರು 32 ಟಿಎಂಸಿ ಸಾಮಥ್ರ್ಯದ ಡ್ಯಾಂ ಅನ್ನೇ ಕೇವಲ 9 ವರ್ಷಗಳಲ್ಲಿ ಅಂದಿನ ರಾಜರು ಪೂರ್ಣಗೊಳಿಸಿದ್ದರು. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ 14 ವರ್ಷಗಳಾದರೂ ಕಾಮಗಾರಿ ಅಪೂರ್ಣವಸ್ಥೆಯಲ್ಲಿರುವುದು ಖಂಡನೀಯ. ಇದರಿಂದ ರೈತರಿಗೆ ಘೋರ ಅನ್ಯಾಯವಾಗಿದೆ ಎಂದು ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಬಗ್ಗೆ ಗಂಭೀರ ಚಿಂತನೆ ನಡೆಸಿ 2023-2024ನೇ ಸಾಲಿನೊಳಗೆ ಹಂತ ಹಂತವಾಗಿ 5.7 ಲಕ್ಷ ಎಕರೆ ಪ್ರದೇಶವನ್ನು ಹನಿ ನೀರಾವರಿ ಒಳಪಿಡಿಸಿ ಯುದ್ಧೋಪಾದಿಯಲ್ಲಿ ಕಾಮಗಾರಿ ಮುಗಿಸಬೇಕು. 2024ರ ಒಳಗೆ ರೈತರ ಜಮೀನಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.