ಸುದ್ದಿವಿಜಯ, ಜಗಳೂರು: ತಾಲೂಕಿನ ಯರಲಕಟ್ಟೆ ಗ್ರಾಮದ ಬೋವಿ ಕಾಲೋನಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಮತ್ತು ಶ್ರೀ ಸಿದ್ದರಾಮೇಶ್ವರ ಭವನ ನಿರ್ಮಾಣ ಸಂಬಂಧ ಶಾಸಕರಾದ ಎಸ್.ವಿ.ರಾಮಚಂದ್ರ ಅವರು ಶಾಸಕರ ಅನುದಾನದಲ್ಲಿ 4.90 ಲಕ್ಷ ರೂ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು.
ಪ್ರಸ್ತುತ ಇನ್ಯಾವುದೊ ಕಾಮಗಾರಿ ಹೆಸರಿನಲ್ಲಿ ಸುಳ್ಳು ಹಣ ಡ್ರಾ ಮಾಡಿ ಸಮುದಾಯ ಭವನಕ್ಕೂ ನೀಡದೇ ಬೋವಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮದ ಆಂಜನೇಯ ಪುರುಷ ಸ್ವಸಾಯ ಟ್ರಸ್ಟ್ ನ ಪದಾಧಿಕಾರಿ ಡಾ.ಹನುಮಂತಪ್ಪ ಹಾಗೂ ಗ್ರಾಮಸ್ಥರು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ಶನಿವಾರ ದೂರು ನೀಡಿದರು.
ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಯರಲಕಟ್ಟೆ ಗ್ರಾಮದಲ್ಲಿ ಡಿ.26,2021ರಂದು ಶಾಸಕ ಎಸ್.ವಿ.ರಾಮಚಂದ್ರ ಸಿದ್ದರಾಮೇಶ್ವರ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ ಎರಡು ವರ್ಷಗಳಾದರೂ ಅನುದಾನ ನೀಡಿಲ್ಲ.
ಅವರನ್ನು ಭೇಟಿ ಮಾಡಿ ಕೇಳಿದರೂ ಪ್ರಯೋಜನವಾಗಿಲ್ಲ. ಅವರು ವಚನ ಭ್ರಷ್ಟರಾಗಿದ್ದಾರೆ. ಬೋವಿ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳ ಮನಸ್ಸಿಗೆ ಘಾಸಿಗೊಳಿಸಿದ್ದಾರೆ.
ಜ1.2023ರಂದು ಶಾಸಕರೇ ಪತ್ರಬರೆದು ಯರಲಕಟ್ಟೆ ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ ಅತ್ಯಂತ ಅವಶ್ಯಕತೆಯಿದ್ದು 4.90 ಲಕ್ಷ ರೂ ಅನುದಾನ ಬಡುಗಡೆ ಮಾಡಿ ಎಂದು ಪತ್ರಬರೆದಿದ್ದಾರೆ. ನಂತರ ಮಾ.6,2023ರಂದು ಶಾಸಕರ ಅನುದಾನ ಅಡಿಯಲ್ಲಿ ಬೋವಿ ಕಾಲೋನಿಯಿಂದ ಸ್ಮಶಾನದವರೆಗೆ ಗ್ರಾವಲ್ ರಸ್ತೆ ನಿರ್ಮಾಣಕ್ಕೆ 4.90 ಲಕ್ಷ ಅನುದಾನ ಬಿಡುಗಡೆ ಮಾಡಲು ಪತ್ರಬರೆಯುತ್ತಾರೆ.
ಬದಲಿ ಕಾಮಗಾರಿ ಹೆಸರಿನಲ್ಲಿ ಸಮುದಾಯಭವನ ನಿರ್ಮಾಣ ಹೇಗೆ ಸಾಧ್ಯ ಎಂದು ಕೇಳಿದರೆ ಎಲ್ಲವನ್ನೂ ಎಂಜಿನಿಯರ್ ವ್ಯವಸ್ಥೆ ಮಾಡುತ್ತಾರೆ ಎಂದು ಶಾಸಕರು ಹಾರಿಕೆ ಉತ್ತರ ನೀಡುತ್ತಾರೆ. ಇತ್ತ ಕಾಮಗಾರಿಯೂ ಪರಿಪೂರ್ಣವಾಗಿ ಆಗಿಲ್ಲ. ಅತ್ತ ಸಮುದಾಯ ಭವನ ನಿರ್ಮಾಣಕ್ಕೆ ಹಣ ಕೊಟ್ಟಿಲ್ಲ. ಅನುದಾನ ಎಲ್ಲಿ ಹೋಯಿತು ಎಂದು ಡಾ.ಹನುಮಂತಪ್ಪ ಸೇರಿದಂತೆ ಗ್ರಾಮದ ಎಲ್ಲ ಸಾರ್ವಜನಿಕರು ಪ್ರಶ್ನಿಸಿ ಮನವಿ ಸಲ್ಲಿಸಿ ಸೂಕ್ತ ತನಿಖೆಯಾಗಬೇಕು ಎಂದು ಕೋರಿಕೊಂಡರು.
ಈ ಸಂದರ್ಭದಲ್ಲಿ ಆಂಜನೇಯ ಪುರುಷ ಸ್ವಸಾಯ ಟ್ರಸ್ಟ್‍ನ ಅಧ್ಯಕ್ಷ ಇ.ಅಂಜೀನಪ್ಪ, ಕಾರ್ಯದರ್ಶಿ ಎಚ್.ಸಂಜೀವಪ್ಪ, ಚೌಡಮ್ಮ, ಹನುಮಕ್ಕ, ಹೇಮಣ್ಣ ಸೇರಿದಂತೆ ಅನೇಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.