ಜಗಳೂರು: ಸಾರ್ವಜನಿಕರೇ ಎಚ್ಚರ ಚಳ್ಳಕೆರೆ ಡಬಲ್ ರಸ್ತೆಯಲ್ಲಿ ಸಂಚರಿಸುವ ಮುನ್ನ ಜೋಪಾನ! ಯಾಕೆ ಗೊತ್ತಾ?

Suddivijaya
Suddivijaya January 23, 2023
Updated 2023/01/23 at 4:36 AM

ಸುದ್ದಿವಿಜಯ, ಜಗಳೂರು: ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪದ ಕಂಬಗಳಿಗೆ ಕತ್ತಲು ಆವರಿಸಿದೆ. ದ್ವಿಮುಖ ರಸ್ತೆಯ ಅಂದ ಹೆಚ್ಚಿಸುವ ಜೊತೆಗೆ ಸಾರ್ವಜನಿಕರಿಗೆ ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆಗಾಗಿ ನಿರ್ಮಾಣ ಮಾಡಲಾಗಿರುವ ಕಬ್ಬಿಣದ ಕೆಲ ವಿದ್ಯುತ್ ಕಂಬಗಳು ಯಾವಾಗ ಯಾವ ಕ್ಷಣದಲ್ಲಾದರೂ ಬೀಳಬಹುದು.

ಹೌದು, 2019-20ನೇ ಸಾಲಿನ ಎಸ್‍ಎಫೆಎಸ್ ವಿಶೇಷ ಅನುದಾನದಲ್ಲಿ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದ ದ್ವಿಮುಖ ರಸ್ತೆಯಲ್ಲಿ ಕೆಲ ವಿದ್ಯುತ್ ಪೋಲ್‍ಗಳು ವಾಲಿಕೊಂಡಿವೆ.

ವಾರ್ಡ್-1 ರಿಂದ ವಾರ್ಡ್-18 ವರೆಗೆ ಒಂದರಂತೆ ಹೊಸ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಚಳ್ಳಕೆರೆ ವೃತ್ತಗಳಲ್ಲಿ ಮಿನಿ ಹೈಮಾಸ್ಟ್ ದೀಪಗಳನ್ನು ಒಂದು ಕೋಟಿ ರೂ ವೆಚ್ಚದಲ್ಲಿ ಕಳೆದ ವರ್ಷ ಜುಲೈ 13 ರಂದು ಶಾಸಕ ಎಸ್.ವಿ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿತ್ತು.

ಜಗಳೂರು ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ದ್ವಿಮುಖ ರಸ್ತೆಯಲ್ಲಿ ಅಳವಡಿಸಲಾಗಿರುವ ಮಿನಿ ಹೈಮಾಸ್ಟ್ ದೀಪದ ಕಂಬಗಳು ವಾಲಿಕೊಂಡಿರುವ ಚಿತ್ರ
ಜಗಳೂರು ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ದ್ವಿಮುಖ ರಸ್ತೆಯಲ್ಲಿ ಅಳವಡಿಸಲಾಗಿರುವ ಮಿನಿ ಹೈಮಾಸ್ಟ್ ದೀಪದ ಕಂಬಗಳು ವಾಲಿಕೊಂಡಿರುವ ಚಿತ್ರ

ಉದ್ಘಾಟನೆಯಾಗಿ ಕೇವಲ ಒಂದೂವರೆ ವರ್ಷದಲ್ಲೇ ಅನೇಕ ವಿದ್ಯುತ್ ದೀಪಗಳ ಕಂಬಗಳಿಗೆ ಅಳವಡಿಸಲಾಗಿರುವ ನಟ್, ಬೋಲ್ಡ್ ಕಳಚುವ ಹಂತದಲ್ಲಿವೆ. ಜೋರಾಗಿ ಸುಂಟರಗಾಳಿ ಬೀಸಿದರೆ ಸಾಕು ನಿತ್ಯ ಸಂಚರಿಸುವ ಸಾರ್ವಜನಿಕ ವಾಹನಗಳ ಮೇಲೆ ಬೀಳುವುದಕ್ಕೆ ಸಿದ್ಧವಾಗಿವೆ.

30ಕ್ಕೂ ಹೆಚ್ಚು ಅಡಿ ಉದ್ದಿವಿರುವ ಈ ವಿದ್ಯುತ್ ಕಂಬಗಳ ಕೆಳಗೆ ವಿದ್ಯುತ್ ಪರಿವರ್ತಕ (ಟಿಸಿ) ಲೈನ್ ಕೂಡ ಹಾದು ಹೋಗಿದೆ. ಒಂದು ವೇಳೆ ಅದರ ಮೇಲೆ ವಿದ್ಯುತ್ ಕಂಬ ಉರುಳಿದರೆ ಶಾರ್ಟ್ ಸಕ್ರ್ಯೂಟ್ ಸಾಕಷ್ಟು ಸಾವು ನೋವು ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ.

ಹೇಳಿಕೇಳಿ ಅನೇಕ ಶಾಲಾ ವಾಹನಗಳು ಅದೇ ಮಾರ್ಗವಾಗಿ ಸಂಚರಿಸುತ್ತವೆ. ಪಕ್ಕದಲ್ಲೇ ಸರಕಾರಿ ಶಾಲೆ ಮತ್ತು ಅದಕ್ಕೆ ಹೊಂದಿಕೊಂಡತೆ ಬೈಕ್ ಶೋ ರೂಂ, ಸಣ್ಣಪುಟ್ಟ ಗೂಡಂಗಡಿಗಳು ಕೂಡಾ ಇದ್ದು ಅಪಾಯ ಸಂಭವಿಸಿದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಎಚ್ಚೆತ್ತುಕೊಳ್ಳದ ಪಪಂ ಅಧಿಕಾರಿಗಳು:
ಕಳೆದ ವಾರ ಶಾಸಕ ಎಸ್.ವಿ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸದಸ್ಯ ಲುಕ್ಮಾನ್ ಉಲ್ಲಾ ಖಾನ್ ಅವರು ಈ ವಿದ್ಯುತ್ ಕಂಬಗಳು ವಾಲಿಕೊಂಡಿರುವ ಬಗ್ಗೆ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಸೇರಿದಂತೆ ಅನೇಕ ಅಧಿಕಾರಿಗಳ ಗಮನ ಸೆಳೆದು ಆಕ್ರೋಶ ಹೊರ ಹಾಕಿದ್ದರು. ತಕ್ಷಣವೇ ರಿಪೇರಿ ಮಾಡುವ ಭರವಸೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಈ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದೇನೆ:
ಟೆಂಡರ್ ಆದ ಕಂಪನಿಯ ಎಂಜಿಯರ್ ಈ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದೇನೆ. ಸ್ಥಳಕ್ಕೆ ಬಂದು ವೀಕ್ಷಿಸಿ ಎಂಟು ದಿನಗಳು ಕಳೆದರೂ ಯಾವುದೇ ದುರಸ್ತಿ ಕಾರ್ಯ ಮಾಡಿಲ್ಲ. ಏಳೆನೇ ವಾರ್ಡ್‍ನ ಸಾರ್ವಜನಿಕರು ಆತಂಕದಲ್ಲೇ ಸಂಚರಿಸುತ್ತಾರೆ. ಇದು ರಾಜ್ಯ ಹೆದ್ದಾರಿ ರಸ್ತೆ. ಹಗಲು ಇರುಳು ಇಲ್ಲಿ ವಾಹನಗಳು ಸಂಚರಿಸುತ್ತವೆ. ಏನಾದರೂ ಅಪಾಯವಾದರೆ ಅದಕ್ಕೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತು ಪಪಂ ಅಧಿಕಾರಿಗಳೇ ನೇರ ಹೊಣೆ.
-ಲುಕ್ಮಾನ್ ಉಲ್ಲಾಖಾನ್, ವಾರ್ಡ್ ಸದಸ್ಯ

ಅಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಮಾಡಿಸಲಿ:

 ಸಾರ್ವಜನಿಕರು ತೆರಿಗೆ ಕಟ್ಟಿದ ಹಣದಲ್ಲಿ ಕೋಟಿ ಕೋಟಿ ವೆಚ್ಚ ಮಾಡಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಆದರೆ ಕೇವಲ ಒಂದೂವರೆ ವರ್ಷದಲ್ಲೇ ಅವುಗಳು ವಾಲಿಕೊಂಡು ಬೀಳುವ ಹಂತದಲ್ಲಿದ್ದು. ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಅನಾಹುತ ಸಂಭವಿಸುವ ಮುನ್ನ ಪಪಂ ಅಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಮಾಡಿಸಲಿ.
-ಹಿರಿಯ ನಾಗರೀಕರು, ಜಗಳೂರು

ದುರಸ್ತಿ ಮಾಡಿಸುತ್ತೇವೆ.
ಈ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿ ಮಾಡಿಸುತ್ತೇವೆ.
-ಲೋಕ್ಯಾನಾಯ್ಕ್, ಪಪಂ ಚೀಫ್ ಆಫೀಸರ್

 

Share this Article
Leave a comment

Leave a Reply

Your email address will not be published. Required fields are marked *

error: Content is protected !!