ಸುದ್ದಿವಿಜಯ,ಜಗಳೂರು: ರೈತರ ಹಿತಕ್ಕಾಗಿ ಜನ್ಮ ತಾಳಿರುವ ರೈತ ಉತ್ಪಾದಕ ಕಂಪನಿಗಳು ರೈತರ ಅಭ್ಯುದಯಕ್ಕೆ ಶ್ರಮಿಸಲಿವೆ. ಇದಕ್ಕೆ ರೈತರ ಸಹಭಾಗಿತ್ವ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು. ಕೃಷಿ ಇಲಾಖೆಯಲ್ಲಿ ರೈತರಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತವೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಶಿರಸಿಯ ತೋಟಗಾರ್ಸ್ ಎಫ್‍ಪಿಓ ಉದಾಹರಣೆಯಾಗಿದೆ.
ಒಂದು ಕಂಪನಿ ಬೆಳೆಯಬೇಕಾದರೆ ಅದಕ್ಕೆ ರೈತರ ಸಹಭಾಗಿತ್ವವೇ ಮುಖ್ಯ. ಮೌಲ್ಯವರ್ಧನೆ, ವ್ಯಾಪಾರ, ರಫ್ತು ಕಂಪನಿಯ ಮೂಲಕ ಮಾಡಿದರೆ ರೈತರಿಗೆ ಭದ್ರತೆ ಇರುತ್ತದೆ. ಕೇವಲ ಎರಡೇ ವರ್ಷದಲ್ಲಿ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಸಂಪನ್ಮೂಲ ಸಂಸ್ಥೆ ಕೃಷಿ ವಿಜ್ಞಾನ ಕೇಂದ್ರ ಮತ್ತು ಎಫ್‍ಪಿಒ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರ ಶ್ರಮ ಕಾಣುತ್ತದೆ. ಕಂಪನಿ ಬೆಳವಣಿಗೆಗೆ ನಮ್ಮ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಕಾರಣ.
ಅವರ ಪರಿಶ್ರಮವೇ ಈ ಮಟ್ಟಕ್ಕೆ ಬೆಳೆಯಲು ಅವರ ಕಾರ್ಯ ಬದ್ಧತೆ ಎದ್ದುಕಾಣುತ್ತಿದೆ ಎಂದು ಸ್ಮರಿಸಿದರು. ರೈತರು ಇ-ಕೇವೈಸಿ ಮಾಡಿಸಿಕೊಳ್ಳುವಲ್ಲಿ ಹಿನ್ನಡೆಯಾಗಿರುವುದು ಬೇಸರ ತಂದಿದೆ. ಕೃಷಿ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ಇ-ಕೆವೈಸಿ ಮಾಡಿಸಲು ಸಿದ್ದರಿದ್ದಾರೆ ಆ ಕಾರ್ಯಕ್ಕೆ ರೈತರು ಕೈಜೋಡಿಸಿ ಎಂದು ಮನವಿ ಮಾಡಿದರು.
ಉಪಕೃಷಿ ನಿರ್ದೇಶಕ ಶಿವಕುಮಾರ್ ಮಲ್ಲಾಡದ ಮಾತನಾಡಿ, ಕೃಷಿ ಎಂದರೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಮಾತ್ರ ಬೆಳವಣಿಗೆ ಸಾಧ್ಯ. ಕೇವಲ ಲಾಭಾಂಶ ನೋಡದೇ ರೈತರ ಹಿತ ಕಾಯುವ ಕಂಪನಿಯಾದರೆ ಕಂಪನಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್, ಸಮುದಾಯ ಭಾಗಿತ್ವವೇ ಕಂಪನಿಯ ಜೀವಾಳ. ಹಿಂದುಳಿತ ತಾಲೂಕಿನಲ್ಲಿ ರೈತರ ಹಿತ ಕಾಪಾಡಲು ಬಿದರಕೆರೆ ಎಫ್‍ಪಿಒ ಮಾಡುವ ಕಾರ್ಯ, ಹೊಣೆಗಾರಿಕೆ ರೈತರಿಗೆ ಮೆಚ್ಚುಗೆಯಾಗಿದೆ. ಇನ್‍ಪುಟ್ ಮತ್ತು ಔಟ್‍ಪುಟ್ ವ್ಯವಹಾರಗಳಲ್ಲಿ ಅತ್ಯಂತ ಪಾರದರ್ಶಕವಾಗಿ ನಿರ್ವಹಣೆ ಮಾಡುತ್ತಿರುವುದು ಕಂಪನಿಯ ಏಳ್ಗೆಯ ದಿಕ್ಸೂಚಿಯನ್ನು ಕಾಣಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ, ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ರೈತರಿಗೆ ಬೆಳೆಗಳ ಬಗ್ಗೆ ಸಂವಾದದ ಮೂಲಕ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಸಬಾ ಕೃಷಿ ಅಧಿಕಾರಿ ಬೀರಪ್ಪ ಕೊರವರ, ಎಫ್‍ಪಿಓ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕರಾದ ಕಲ್ಲೇದೇವರಪುರ ಕೃಷ್ಣಮೂರ್ತಿ, ಬಿದರಕೆರೆ ರೇವಣಸಿದ್ದಪ್ಪ, ಅರಿಶಿಣಗುಂಡಿ ನಾಗರಾಜ್, ಬಿಸ್ತುವಳ್ಳಿ ನಾಗರಾಜ್, ರಸ್ತೆಮಾಕುಂಟೆ ಕವಿತಾ ಸ್ವಾಮಿ ಸೇರಿದಂತೆ 36 ಗ್ರಾಮಗಳ ಎಫ್‍ಪಿಒ ಶೇರುದಾರ ಸದಸ್ಯರು ಭಾಗವಹಿಸಿದ್ದರು.