ಕ್ಯಾನ್ಸರ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಕ್ಕೆ ಸಿಕ್ಕೀತೆ ನೆರವಿನ ‘ಹಸ್ತ’?

Suddivijaya
Suddivijaya August 2, 2023
Updated 2023/08/03 at 1:54 AM

ಸುದ್ದಿವಿಜಯ,ಜಗಳೂರು: ಅದು ಗಂಡ ಹೆಂಡತಿ ಮತ್ತು ಮಗು ಇರುವ ಮುದ್ದಾದ ಕುಟುಂಬ. ಮೆಕಾನಿಕ್ ಆಗಿ ಜೀವನ ನಡೆಸುತ್ತಿದ್ದ ಸುಹೇಲ್ ಅಹಮದ್ ಅವರ ಜೀವನದಲ್ಲಿ ವಿಧಿ ಅಟ್ಟಹಾಸ ಮೆರೆದು ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಆಧಾರ ಸ್ತಂಭವೇ ಬೀಳುವ ಹಂತಕ್ಕೆ ಬಂದು ತಲುಪಿದೆ.

ಹೌದು, ಜಗಳೂರು ಪಟ್ಟಣದ ಇಮಾಂ ಬಡಾವಣೆಯ ನಿವಾಸಿ ಸುಹೇಲ್ ಅಹಮದ್ ಅವರಿಗೆ ಬಾಯಿ ಕ್ಯಾನ್ಸರ್ ರೋಗ ತಗುಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ತಂದೆ ತೀರಿದ ಮೇಲೆ ಮೆಕಾನಿಕ್ ಆಗಿ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತು ಬದುಕಿನ ಸಂಸಾರ ನೌಕೆಯನ್ನು ಸಾಗಿಸುತ್ತಿದ್ದ ಸುಹೇಲ್ ಕಳೆದ ಒಂದೂವರೆ ವರ್ಷದಿಂದ ಬಾಯಿ ಕ್ಯಾನ್ಸರ್ ರೋಗ ತಗುಲಿ ಊಟವಿಲ್ಲದೇ ಗಂಟಲಿಗೆ ಅಳವಡಿಸಲಾಗಿರುವ ಪೈಪ್ ಮೂಲಕವೇ ಗಂಜಿ ಕುಡಿದು ಜೀವ ಹಿಡಿದುಕೊಂಡಿದ್ದಾರೆ.

ಕ್ಯಾನ್ಸರ್ ತಗುಲಿದ ಮೇಲೆ ತನ್ನ ಮೂರು ಜನ ಸಹೋದರರು ಸುಹೇಲ್‍ಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇಲ್ಲಿಯವರೆಗೆ ಕನಿಷ್ಠ 8 ಲಕ್ಷ ರೂ ಖರ್ಚು ಮಾಡಿದರೂ ಅವರಿಗೆ ತಗುಲಿರುವ ರೋಗ ವಾಸಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಬಲಭಾಗದ ದವಡೆ ಸಂಪೂರ್ಣ ಹರಿದು ಹೋಗಿದೆ. ಇದಕ್ಕೆ ಕಾರಣ ಸುಹೇಲ್ ಹಾಕುತ್ತಿದ್ದ ಗುಟ್ಕಾ ಸೇವನೆ. ಇದರಿಂದ 37 ವರ್ಷದ ಯುವಕ ಸುಹೇಲ್‍ಗೆ ಸಾವು ಬದುಕಿನ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದಾರೆ. ಹೀಗಾಗಿ ಸಂಕಟ ಅವರಿಗಷ್ಟೇ ಅಲ್ಲದೇ ಇಡೀ ಸಂಸಾರವನ್ನೇ ಬೀದಿಯಲ್ಲಿ ನಿಲ್ಲುವಂತಾಗಿದೆ.

ಕ್ಯಾನ್ಸರ್ ರೋಗವಾಸಿಗಾಗಿ ಬೆಂಗಳೂರಿನ ಕಿದ್ವಾಯಿ ಮತ್ತು ಶಿವಮೊಗ್ಗದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ರೋಗ ವಾಸಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸಹೋದರರು, ಸಂಬಂಧಿಕರು ಸಾಕಷ್ಟು ಹಣ ಖರ್ಚು ಮಾಡಿದರೂ ಚಿಕಿತ್ಸೆಗೆ ಹಣವಿಲ್ಲದೇ ಸಾಲ ಬೆಟ್ಟದಷ್ಟು ಬೆಳೆದು ನಿಂತಿದೆ.

ಜೊತೆಗೆ ಪ್ರತಿ ತಿಂಗಳು ಮನೆಗೆ ಬಾಡಿಗೆ ಕಟ್ಟಬೇಕು. ಸಂಸಾರ ನೌಕೆ ಸಾಗಿಸಲು ಹಣಬೇಕು. ಹೆಂಡತಿ ಫಾತಿಮಾ ಗಂಡನ ಈ ಪರಿಸ್ಥಿತಿ ನೋಡಿ ದಿಕ್ಕು ತೋಚದಂತಾಗಿದ್ದಾರೆ. ಮುದ್ದಾದ ಮಗುವಿನ ಜೊತೆ ಸುಹೇಲ್‍ಗೆ ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಆದರೆ ಸುಹೇಲ್ ಅಹಮದ್ ಜೀವನದಲ್ಲಿ ವಿಧಿ ಘೋರ ಅಟ್ಟಹಾಸ ಮೆರೆಯುತ್ತಿದ್ದಾಳೆ.

ಈಗಾಗಲೇ ಕಿಮೋ, ರೇಡಿಯೋ ಥೆರಪಿಗಾಗಿ ಈಗಾಗಲೇ ಲಕ್ಷಾಂತರ ರೂ ಖರ್ಚುಮಾಡಿದ್ದರಿಂದ ಹಣದ ಅವಶ್ಯಕತೆಯಿದೆ. ಆದರೆ ಪತ್ನಿ ಹೇಳುವುದು ಬೇರೆ. ಹಣ ಕೊಟ್ಟರೆ ಕೇವಲ ನೆರವು ನೀಡಿದಂತಾಗುತ್ತದೆ.

ಅದರ ಬದಲು ಹತ್ತನೇ ತರಗತಿ ಓದಿರುವ ನನಗೆ ಯಾವುದಾರೂ ಇಲಾಖೆಯಲ್ಲಿ ಉದ್ಯೋಗ ಇಲ್ಲವೇ ಸ್ವಂತ ಉದ್ಯೋಗಕ್ಕಾಗಿ ಶಾಸಕರಾದ ಬಿ.ದೇವೇಂದ್ರಪ್ಪ ಅವರು ನೆರವು ನೀಡಿದರೆ ಅವರ ಸಹಾಯವನ್ನು ಎಂದು ಮರೆಯುವುದಿಲ್ಲ ಎಂದು ಮನವಿ ಮಾಡುತ್ತಾರೆ.

ಒಟ್ಟಿನಲ್ಲಿ ಸುಹೇಲ್ ಅಹದಮ್ ಅವರ ಸಾವು ಬದುಕಿನ ಹೋರಾಟದಲ್ಲಿ ಅವರ ಸಂಸಾರ ಸಂಕಷ್ಟಕ್ಕೆ ಆ ಭಗವಂತ ಬರುತ್ತಾನೋ ಇಲ್ಲವೋ ಆದರೆ ಸಂಕಷ್ಟಗಳಿಗೆ ಮಿಡಿಯುವ ಮನಸ್ಸುಗಳು ಬೇಕು. ಸಹಾಯ ಹಸ್ತ ಚಾಚುವ ಕೈಗಳು ಬೇಕಾಗಿದೆ.

ನೆರವಿನ ಭರವಸೆ ನೀಡಿದ ಶಾಸಕ ಬಿ.ದೇವೇಂದ್ರಪ್ಪ

ಸಿದ್ದರಾಮಯ್ಯ ಜನ್ಮದಿನಾಚರಣೆ ಗುರುವಾರ ನಡೆಯಲಿದ್ದು ಅವರ ಹುಟ್ಟು ಹಬ್ಬದ ಅಂಗವಾಗಿ ಸುಹೇಲ್‍ಗೆ ಆದಷ್ಟು ನೆರವು ನೀಡಲು ಶ್ರಮಿಸುತ್ತೇವೆ. ಅವರು ಆಸ್ಪತ್ರೆಗೆ ಖರ್ಚು ಮಾಡಿರುವ ಹಣವನ್ನು ಸಿಎಂ ಪರಿಹಾರ ನಿಧಿಯಿಂದ ತರಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.

ಆರ್ಥಿಕ ನೆರವು ಮತ್ತು ಸಹಾಯಕ್ಕಾಗಿ ಸುಹೇಲ್ ಸಹೋದರ ಮಹಮದ್ ರಿಯಾಜ್ ಸಂಪರ್ಕಿಸಿ

8123452388

Share this Article
Leave a comment

Leave a Reply

Your email address will not be published. Required fields are marked *

error: Content is protected !!