suddivijaya21/5/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಜಮ್ಮಾಪುರ ಕೆರೆಯಲ್ಲಿ ಮಹಾರಾಷ್ಟ್ರ ಮೂಲದ ಸಂತೋಷ್ ರಾಥೋಡ್ ಎಂಬ ವ್ಯಕ್ತಿ 40ಕ್ಕೂ ಹೆಚ್ಚು ಕುಟುಂಬಗಳ ನೆರವಿನಿಂದ ಜಾಲಿ ಗಿಡದ ಬೊಟ್ಟೆ ಕತ್ತರಿಸಿ ಸುಟ್ಟು ಇದ್ದಿಲು ತಯಾರಿಸುತ್ತಿದ್ದ.
ವರದಿ ಸುದ್ದಿವಿಜಯದಲ್ಲಿ ಪ್ರಕಟವಾಗುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರವೀಣ್ ಮತ್ತು ಎಇ ರಾಘವೇಂದ್ರ ಭೇಟಿ ನೀಡಿ, ಜಾಗವನ್ನು ತೆರವುಗೊಳಿಸುವಂತೆ ಸೂಚನೆ ನೀಡಿ ಒತ್ತೆಯಾಳಾಗಿದ್ದ ಕಾರ್ಮಿಕರನ್ನು ಬಂಧ ಮುಕ್ತಗೊಳಿಸಿದರು.
ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚತ್ತ ಅಧಿಕಾರಿಗಳು, ಅರಿಶಿಣಗುಂಡಿ ಗ್ರಾಮಸ್ಥರ ನೆರವಿನೊಂದಿಗೆ ದುರ್ಗಮ ಪ್ರದೇಶಕ್ಕೆ ತೆರಳಿ ಕಾರ್ಮಿಕರ ಸ್ಥಿತಿ ನೋಡಿ ಮರುಗಿದರು.
ಊಟ, ನೀರು ಇಲ್ಲದೇ ಸೊರಗಿದ್ದ 40 ಕುಟುಂಬಗಳಿಗೆ ಲಘು ಆಹಾರ ಪದಾರ್ಥಗಳನ್ನು ಕೊಡಿಸಿ ಸಾಂತ್ವನ ಹೇಳಿ ಜೀತ ಮುಕ್ತಗೊಳಿಸಿ ಸ್ವಗ್ರಾಮಗಳಿಗೆ ತೆರಳಲು ವ್ಯವಸ್ಥೆ ಮಾಡಿದ್ದರು.
ಪರಾರಿಯಾಗಿದ್ದ ಸಂತೋಷ್:
ಕಾರ್ಮಿಕರನ್ನು ಕರೆತಂದು ಸರಿಯಾದ ಊಟದ ವ್ಯವಸ್ಥೆ ಸೇರಿದಂತೆ ನಿಕೃಷ್ಟವಾಗಿ ನಡೆಸಿಕೊಂಡಿದ್ದ ಮಾಲೀಕ ಸಂತೋಷ್ ರಾಥೋಡ್ ಅಧಿಕಾರಿಗಳು ಬರುವ ಸುಳಿವು ಸಿಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ.
ಮೊಬೈಲ್‍ಗೆ ಕರೆ ಮಾಡಿದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಕರೆದರೂ ಬರಲಿಲ್ಲ. ನಂತರ ಅಧಿಕಾರಿಗಳೇ ಕಾರ್ಮಿಕರ ದಯಾನಿಯ ಪರಿಸ್ಥಿತಿ ನೋಡಿ ಸಹಾಯ ಮಾಡಿ ಅವರನ್ನು ತಮ್ಮ ಗ್ರಾಮಗಳಿಗೆ ತೆರಳುವ ವ್ಯವಸ್ಥೆ ಮಾಡಿದರು.
ಅರಿಶಿಣಗುಂಡಿ ಗ್ರಾಮಸ್ಥರಾದ ಸಿ.ಬಿ.ವೆಂಟಕೇಶ್, ಸಿದ್ದನಗೌಡ್ರು, ಎನ್.ಆರ್. ಅಜ್ಜಯ್ಯ, ಎನ್.ಆರ್. ಬಸವರಾಜ್, ಪರಮೇಶ್ ಸೇರಿದಂತೆ ಅನೇಕರು ಕಾರ್ಮಿಕರ ನೆರವಿಗೆ ಧಾವಿಸಿ ಬಂಧ ಮುಕ್ತಗೊಳಿಸಿದರು.
ವ್ಯಕ್ತಿಯ ವಿರುದ್ಧ ಶಿಸ್ತು ಕ್ರಮ
ಜಮ್ಮಾಪುರ ಕೆರೆಯಲ್ಲಿ ಇದ್ದಿಲು ಸುಡುವ ಕಾರ್ಮಿಕರ ಸ್ಥಿತಿ ನೋಡಿ ನಿಜಕ್ಕೂ ನೋವಾಯಿತು. ಮಕ್ಕಳನ್ನು ಕರೆತಂದು ಮನೆಯಿಲ್ಲದೇ ಬಿರು ಬಿಸಿಲಿನಲ್ಲಿ ಕೆಲಸ ಮಾಡಿಸುತ್ತಿದ್ದ ಯಜಮಾನ ಸಂತೋಷ್ ಎಂಬ ವ್ಯಕ್ತಿಗೆ ಕರುಣೆಯೇ ಇಲ್ಲ.
ಆ ವ್ಯಕ್ತಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ತಹಶೀಲ್ದಾರ್‍ಗೆ ಪತ್ರಬರೆಯುವುದಾಗಿ ಸಣ್ಣ ನೀರಾವರಿ ಇಲಾಖೆ ಎಇಇ ಪ್ರವೀಣ್ ಮತ್ತು ಎಇ ರಾಘವೇಂದ್ರ ಪ್ರತಿಕ್ರಿಯೆ ನೀಡಿದರು.