ಜಗಳೂರು ಸರಕಾರಿ ಆಸ್ಪತ್ರೆಯಲ್ಲಿ ‘ಯಮ’ರ್ಜನ್ಸಿ!

Suddivijaya
Suddivijaya July 27, 2023
Updated 2023/07/27 at 11:51 AM

ಸುದ್ದಿವಿಜಯ(ವಿಶೇಷ), ಜಗಳೂರು: ಸುಮಾರು 80 ವರ್ಷ ಹಳೆಯದಾದ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸೋನೆ ಮಳೆಗೆ ಸೋರುತ್ತಿದ್ದು ರೋಗಿಗಳಿಗೆ ನರಳಾದ ಜೊತೆಗೆ ಮಳೆ ಕಾಟ ಅನುಭವಿಸುವಂತಾಗಿದೆ.

ವಿಜಯನಗರ, ಚಿತ್ರದುರ್ಗ, ಕೊಟ್ಟೂರು, ಚಳ್ಳಕೆರೆ ಗಡಿ ಭಾಗದ ಜನರು ಅನಾರೋಗ್ಯ ಉಂಟಾದಾಗ ದಾಖಲಾಗುವುದು ಹತ್ತಿರವಾಗುವ ಜಗಳೂರು ಸರಕಾರಿ ಆಸ್ಪತ್ರೆಗೆ. ಆದರೆ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಮೇಲ್ಛಾವಣಿಯಲ್ಲಿ ನೀರು ನಿಂತು ಮಾಳಿಗೆ ಮನೆಯಂತೆ ಸೋರುತ್ತಿದೆ.

ಐಸಿಯು ವಾರ್ಡ್‍ನ ಮೇಲ್ಛಾವಣಿ, ಗಾಯಾಳು ಕೊಠಡಿ, ಮಹಿಳಾ ವಾರ್ಡ್‍ಗಳಲ್ಲಿ ಮಳೆಯ ನೀರು ತೊಟ್ಟಿಕ್ಕುತ್ತಿದೆ. ಅಷ್ಟೇ ಅಲ್ಲ ಹೊರ ರೋಗಿಗಳು ಒಳ ರೋಗಿಗಳ ವಾರ್ಡ್‍ಗಳ ಸ್ಥಿತಿ ಅಯೋಮಯವಾಗಿದೆ.

ಮೈಸೂರು ಆಳ್ವಿಕೆಯಲ್ಲಿ ನಿರ್ಮಾಣವಾದ ಆಸ್ಪತ್ರೆ:

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಈ ಸರಕಾರಿ ಆಸ್ಪತ್ರೆ ಕಟ್ಟಡಕ್ಕೆ 1936ರಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. 1940ರಲ್ಲಿ ಪೂರ್ಣಗೊಂಡು ಉದ್ಘಾಟಿಸಲಾಯಿತು. 1963 ಮಹಿಳಾ ವಿಶೇಷ ವಾರ್ಡ್‍ಗಳನ್ನು ನಿರ್ಮಾಣ ಮಾಡಲಾಯಿತು. 2007ರಲ್ಲಿ ನೂರು ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು.

ಇರುವ ಹಳೆಯ ಕಟ್ಟಡದ ಮೇಲೆಯೇ ಹೊಸ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಆದರೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಮಳೆಗಾಲದಲ್ಲಿ ನೀರು ಜಿನುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದಲ್ಲಿ ವಿದ್ಯುತ್ ಸಮಸ್ಯೆ ಇರುವ ಕಾರಣ ರೋಗಿಗಳಿಗೆ ಎಮರ್ಜಿನಿ ವೇಳೆ ವಿದ್ಯುತ್ ಕೈಕೊಟ್ಟ ಅನೇಕ ಘಟನೆಗಳು ನಡೆದಿವೆ.

ಡ್ರೈನೇಜ್ ಅವ್ಯವಸ್ಥೆ: ಆಸ್ಪತ್ರೆಯ ತ್ಯಾಜ್ಯದ ನೀರು ಹೋಗಲು ನಿರ್ಮಾಣ ಮಾಡಲಾಗಿರುವ ಡ್ರೈನೇಜ್ ಅವ್ಯವಸ್ಥೆ ಉಂಟಾಗಿದೆ. ಕಟ್ಟಡಗಳು ಸೋರತ್ತಿರುವುದರಿಂದ ಪ್ಯಾಸೇಜ್‍ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನ ಜಂಗುಳಿ ಹೆಚ್ಚಾಗಿದೆ.

ಮೊದಲೆಲ್ಲಾ ಕಡಿಮೆ ರೋಗಿಗಳು ಬರುತ್ತಿದ್ದರು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಹಳ್ಳಿಗಳ ರೋಗಿಗಳು ದಿನದಿಂದ ದಿನಕ್ಕೆ ಚಿಕಿತ್ಸೆಗಾಗಿ ಹೆಚ್ಚಾಗಿ ಬರುತ್ತಿರುವ ಕಾರಣ ಒಳ ರೋಗಿಗಳು, ಹೆರಿಗೆ ವಾರ್ಡ್‍ಗಳಲ್ಲಿ ರೋಗಿಗಳ ಸಂಖ್ಯೆ ದ್ವಿಗುಣವಾಗಿದೆ.

ಕಟ್ಟಡ ವಿಸ್ತಾರ ಅನಿವಾರ್ಯ:

ಹಳೆಯ ಕಟ್ಟಡವಾಗಿರುವ ಕಾರಣ ರೋಗಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸೋರುತ್ತಿರುವ ಕಟ್ಟಡದಲ್ಲೇ ರೋಗಿಗಳು ಚಿಕಿತ್ಸೆ ಪಡೆಯುವಂತಾಗಿದೆ. ಆದರೆ ಪಟ್ಟಣದ ಸುತ್ತಮುತ್ತ ಉತ್ತಮವಾದ ಜಾಗದ ಸೌಲಭ್ಯ ಇಲ್ಲದ ಕಾರಣ ಹೊಸ ಕಟ್ಟಡ ನಿರ್ಮಾಣದ ವಿಷಯ ಜನ ಪ್ರತಿನಿಧಿಗಳಿಗೂ ತಲೆ ನೋವಾಗಿದೆ.

ಫಿಜಿಯನ್ ಇಲ್ಲ:

ಈ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಸಮಸ್ಯೆಯಿಲ್ಲ, ಕೀಲು ಮೂಳೆ, ಚರ್ಮ, ಮಕ್ಕಳ ವೈದ್ಯರು, ಸ್ತ್ರೀ ರೋಗ ತಜ್ಞರು, ಕಣ್ಣು, ಕಿವಿ, ಮೂಗು ತಜ್ಞ ವೈದ್ಯರಿಗೆ ಸಮಸ್ಯೆಯಿಲ್ಲ. ಆದರೆ ಹೃದಯಾಘಾತ, ಪ್ಯಾರಲಿಸಿಸ್ ನಂತಹ ಗಂಭೀರ ಸಮಸ್ಯೆ ಉಂಟಾದರೆ ಚಿತ್ರದುರ್ಗ, ದಾವಣಗೆರೆ, ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೋ ರೋಗಿಗಳು ಫಿಜಿಷಿಯನ್ ಇಲ್ಲದ ಕಾರಣ ದಾರಿ ಮಧ್ಯೆಯೇ ಮೃತ ಪಟ್ಟಿದ್ದಾರೆ.

ಇಂತಹ ಗಂಭೀರ ಸಮಸ್ಯೆ ಹೊಂದಿರುವ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣವಾದರೆ ಮಾತ್ರ ಸುಧಾರಣೆ ಸಾಧ್ಯ. ಸರಕಾರ, ಶಾಸಕರು, ಆರೋಗ್ಯ ಸಚಿವರು, ಡಿಎಚ್‍ಒ ಎಚ್ಚೆತ್ತುಕೊಳ್ಳದೇ ನಿರ್ಲಷ್ಯ ಮಾಡಿದರೆ ಅಪಾಯ ಗ್ಯಾರಂಟಿ.

ಜೀವ ಬಿಗಿ ಹಿಡಿದು ಚಿಕಿತ್ಸೆ:

ಆಸ್ಪತ್ರೆಗೆ ರೋಗವಾಸಿ ಮಾಡಿಕೊಳ್ಳಲು ಬಂದರೆ ಆಸ್ಪತ್ರೆಯ ಪರಿಸ್ಥಿತಿ ನೋಡಿದರೆ ಜೀವ ಭಯ ಹೆಚ್ಚಾಗುತ್ತದೆ. ಸೋರುತ್ತಿರುವ ಆಸ್ಪತ್ರೆಯಲ್ಲೇ ಜೀವ ಬಿಗಿ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ನೋವಿನಿಂದ ವಿಕ ಗೆ ಪ್ರತಿಕ್ರಿಯೆ ನೀಡಿದರು.

ನೂತನ ಆಸ್ಪತ್ರೆ ನಿರ್ಮಾಣವಾಗದಿದ್ದರೆ ನಿರ್ವಹಣೆ ಅಸಾಧ್ಯ:

ಜಗಳೂರು ಸರಕಾರಿ ಆಸ್ಪತ್ರೆ ಶಿಥಿಲಾವಸ್ಥೆಯ ಬಗ್ಗೆ ಶಿವಮೊಗ್ಗದ ಕ್ವಾಲಿಟಿ ಕಂಟ್ರೋಲ್‍ನಿಂದಲೇ ಕಟ್ಟಡ ರೋಗಿಗಳಿಗೆ ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ. ಜಿಲ್ಲೆಯ ಡಿಎಚ್‍ಒ ಅವರಿಗೂ ಪತ್ರ ಬರೆದಿದ್ದೇವೆ. ಶಾಸಕರಾದ ಬಿ.ದೇವೇಂದ್ರಪ್ಪ ಅವರ ಗಮನಕ್ಕೂ ತಂದಿದ್ದೇವೆ. ಸದ್ಯ ರೋಗಿಗಳನ್ನು ಸೋರುತ್ತಿರುವ ಕೋಠಡಿಗಳಿಂದ ಬೇರೆಡೆ ಸ್ಥಳಾಂತರ ಮಾಡಿದ್ದೇವೆ. ಆದಷ್ಟು ಬೇಗ ನೂತನ ಆಸ್ಪತ್ರೆ ನಿರ್ಮಾಣವಾಗದಿದ್ದರೆ ನಿರ್ವಹಣೆ ಮಾಡಲು ಅಸಾಧ್ಯ.
-ಡಾ.ಆರ್.ಷಣ್ಮುಖ, ವೈದ್ಯಾಧಿಕಾರಿಗಳು, ಜಗಳೂರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!