ಜಗಳೂರು: ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ವಿರುದ್ಧ ಕ್ರಮಕ್ಕೆ ವಕೀಲರ ಪ್ರತಿಭಟನೆ

Suddivijaya
Suddivijaya November 20, 2023
Updated 2023/11/20 at 1:45 PM

ಸುದ್ದಿವಿಜಯ, ಜಗಳೂರು: ಪಟ್ಟಣದ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಅವರು ಠಾಣೆಗೆ ಬಂದ ವಕೀಲರಾದ ಬಿ.ಕೊಟ್ರೇಶ್ ಎಂಬುವರಿಗೆ ಅಗೌರವ ತೋರಿಸಿ, ದಬ್ಬಾಳಿಕೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಸೋಮವಾರ ತಾಲೂಕು ವಕೀಲರ ಸಂಘದಿಂದ ಮನವಿ ಸಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಈ.ಓಂಕಾರೇಶ್ವರ್ ಮಾತನಾಡಿ, ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನ.17 ರಂದು ಕಕ್ಷಿದಾರರೊಂದಿಗೆ ವಕೀಲರಾದ ಬಿ.ಕೊಟ್ರೇಶ್ ಠಾಣೆಗೆ ಬಂದಾಗ ಪಿಐ ಎಂ.ಶ್ರೀನಿವಾಸ್‍ರಾವ್ ಕಕ್ಷಿದಾದಾರರ ಎದುರಿನಲ್ಲೇ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.

ವಕೀಲರ ವೃತ್ತಿಗೆ ಅಗೌರವ ತೋರಿದ್ದಾರೆ. ಅವರ ವರ್ತನೆಯನ್ನು ನ್ಯಾಯವಾದಿಗಳ ಸಂಘ ಖಂಡಿಸುತ್ತದೆ. ಕಾನೂನು ಗೊತ್ತಿಲ್ಲದ ಕಕ್ಷಿದಾರರ ಪರವಾಗಿ ವಕೀಲರು ಠಾಣೆಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಬೇಕು. ಆದರೆ ಅವರು ಅನಾಗರೀಕರಂತೆ ವರ್ತಿಸಿದ್ದಾರೆ.

ಅಧಿಕಾರ ಇದೆ ಎಂದು ಸಾರ್ವಜನಿಕರ ಮೇಲೆ ಮತ್ತು ವಕೀಲರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ತಕ್ಷಣವೇ ಅವರನ್ನು ಅಮಾನತು ಮಾಡಬೇಕು. ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದ್ದೇವೆ.

ಅವರ ಪರವಾಗಿ ಯಾರೂ ಸಹ ವಕಾಲತ್ತು ಮಾಡದಂತೆ ರಾಜ್ಯದ ಎಲ್ಲ ತಾಲೂಕು ವಕೀಲರ ಸಂಘಕ್ಕೆ ಮಾಹಿತಿ ರವಾನೆ ಮಾಡಿದ್ದೇವೆ. ಗೃಹ ಸಚಿವರು ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಕೀಲ ಟಿ.ಸಣ್ಣ ಓಬಯ್ಯ ಮಾತನಾಡಿ, ನ್ಯಾಯಕ್ಕಾಗಿ ವಕೀಲರನ್ನು ಕರೆದುಕೊಂಡು ಠಾಣೆಗೆ ಹೋಗುವುದು ತಪ್ಪಾ? ಕಕ್ಷಿದಾರರಿಗೆ ಕಾನೂನಿನ ಜ್ಞಾನ ಇರುವುದಿಲ್ಲ. ಹಾಗಾಗಿ ವಕೀಲರನ್ನು ಕರೆದುಕೊಂಡು ಹೋಗಿರುತ್ತಾರೆ. ‘ನೀವೇಕೆ ವಕೀಲರನ್ನು ಕರೆತಂದಿದ್ದೀರಿ.

ನಿಮ್ಮನ್ನು ಬೂಟಲ್ಲಿ ಹೊಡೆಯುತ್ತೇನೆ’ ಎಂದು ಕಕ್ಷಿದಾರರಿಗೂ ಇನ್‍ಸ್ಪೆಕ್ಟರ್ ದೌರ್ಜನ್ಯ ಮಾಡಿದ್ದಾರೆ. ಅಧಿಕಾರ ಇದೆ ಎಂದು ಪ್ರಜಾಪ್ರಭುತ್ವದಲ್ಲಿ ಕಾನೂನು ಮೀರಿ ವರ್ತಿಸುವ ಹಕ್ಕು ಅವರಿಗಿಲ್ಲ.

 ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ತಾಲೂಕು ವಕೀಲರ ಸಂಘದಿಂದ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
 ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ತಾಲೂಕು ವಕೀಲರ ಸಂಘದಿಂದ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಗೃಹ ಮಂತ್ರಿಗಳು ಮತ್ತು ದಾವಣಗೆರೆ ಎಸ್‍ಪಿ ಇನ್‍ಸ್ಪೆಕ್ಟರ್ ಶ್ರೀನಿವಾಸ್‍ರಾವ್ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಕೀಲರ ಸಂಘದ ಕಾರ್ಯದರ್ಶಿ ಕೆ.ವಿ.ರುದ್ರೇಶ, ವಕೀಲರಾದ ತಿಪ್ಪೇಸ್ವಾಮಿ, ಬಸವರಾಜ್, ಸಣ್ಣ ಓಬಳೇಶ್, ಶಿವಕುಮಾರ್, ದೊಡ್ಡಬೋರಯ್ಯ, ಹಾಲಪ್ಪ, ಮರೆನಹಳ್ಳಿ ಬಸವರಾಜ್, ಕರಿಬಸಪ್ಪ, ಕರಿಬಸಯ್ಯ, ಕಲ್ಲೇಶ್, ವೇದಮೂರ್ತಿ ಸೇರಿದಂತೆ ಅನೇಕರು ಇದ್ದರು.

ಕಾನೂನು ಪ್ರಕಾರ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು ತಪ್ಪಾ?

ದಿಬ್ಬದಹಟ್ಟಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಮಧ್ಯೆ ಸಮಸ್ಯೆಯಿತ್ತು. ಎರಡೂ ಸಮುದಾಯದವರು ಠಾಣೆಗೆ ಬಂದಾಗ ಕಾನೂನು ಪ್ರಕಾರ ಬಗೆಹರಿಸಿಕೊಳ್ಳಿ ಎಂದು ಹೇಳಿದೆವು. ಠಾಣೆಗೆ ಬಂದ ದೂರುದಾರಿಗೆ ವಕೀಲ ಕೊಟ್ರೇಶ್ ಎಂಬುವರು ನನ್ನ ಎದುರೇ ದಮ್ಕಿ ಹಾಕಿದರು.

ಹಾಗಾಗಿ ನೀವು ಕೋರ್ಟ್‍ನಲ್ಲೇ ವಾದಮಾಡಿ. ಠಾಣೆಗೆ ಬಂದು ಟೇಬಲ್ ಗುದ್ದಿ ಪ್ರಶ್ನಿಸಬೇಡಿ ಎಂದು ಹೇಳಿದೆವು. ಅವರು ಠಾಣೆಗೆ ಬಂದು ವರ್ತಿಸಿದ ರೀತಿ ಸಿಸಿಟಿವಿ ಫುಟೇಜ್‍ನಲ್ಲಿ ರೆಕಾರ್ಡ್ ಆಗಿದೆ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ವಿಕಾಗೆ ಪ್ರತಿಕ್ರಿಯೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!