‘ನಾನು ಮದ್ಯದ ಸುಳಿಯಿಂದ ಹೊರ ಬಂದಿದೇನೆ, ನೀವು ಬಿಡ್ರಿ’: ಶಾಸಕ ಬಿ.ದೇವೇಂದ್ರಪ್ಪ!

Suddivijaya
Suddivijaya July 25, 2023
Updated 2023/07/25 at 12:03 PM

ಸುದ್ದಿವಿಜಯ, ಜಗಳೂರು: ನಾನು ಸಹ 40 ವರ್ಷಗಳ ಕಾಲ ಮದ್ಯದ ದಾಸನಾಗಿದ್ದೆ. ಆದರೆ ಅದೆನ್ನೆಲ್ಲಾ ಬಿಟ್ಟು ನಾಲ್ಕು ವರ್ಷಗಳೇ ಕಳೆದಿವೆ. ದಯಮಾಡಿ ಮದ್ಯ ಸೇವನೆ ಮಾಡಬೇಡಿ ಎಂದು ಮದ್ಯವೆಸನಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಗಳೂರು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯಕ್ತ ಆಶ್ರಯದಲ್ಲಿ ಎಂಟು ದಿನಗಳ ಕಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿರುವ 1691ನೇ ಮದ್ಯ ವರ್ಜನ ಶಿಬಿರದಲ್ಲಿ ಸೋಮವಾರ ರಾತ್ರಿ ಪಾಲ್ಗೊಂಡು ಮದ್ಯವೆಸನಿಗಳಿಗೆ ಕಿವಿ ಮಾತು ಹೇಳಿದರು.

ಸಂಜೆ 5 ಆದರೆ ನಾನು ಅದಕ್ಕೆ ದಾಸಾನು ದಾಸನಾಗಿದ್ದೆ. 40 ವರ್ಷಗಳ ಕಾಲ ಕುಡಿಯುವುದನ್ನು ಬಿಡುತ್ತೇನೆ ಎಂದು ಎಲ್ಲ ದೇವರುಗಳ ಮೇಲೆ ಆಣೆ, ಪ್ರಮಾಣ ಮಾಡುತ್ತಿದ್ದೆ. ಎರಡು ದಿನ ಸುಮ್ಮನಿರುತ್ತಿದ್ದೆ ಆದರೆ ದೇವರೇ ನೀನಿರುವುದೇ ಕ್ಷಮಿಸಲು. ನನ್ನ ತಪ್ಪನ್ನು ಹೊಟ್ಟೆಗೆ ಹಾಕಿಕೋ, ನಾನು ಸಹ ಇದನ್ನು ಹೊಟ್ಟೆಗೆ ಹಾಕಿಕೊಳ್ತೆನೆ ಎಂದು ಆಣೆಗಳನ್ನು ಮೀರಿ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿದ್ದೆ.

ಆದರೆ ಒಂದು ದಿನ ನನ್ನ ದೇಹವೇ ಅದನ್ನು ಸ್ವೀಕರಿಸಲಿಲ್ಲ. ಅಲ್ಲಿಂದ ತೆಜಿಸಿದೆ. ಮದ್ಯ ಎನ್ನುವುದು ದರಿದ್ರ. ನಾನು ಬಿಟ್ಟಿದ್ದೇನೆ ಎಂದರೆ ಅದನ್ನು ಯಾರು ನಂಬಲ್ಲ. ಜನರಿಗೆ ನಂಬಿಸುವ ಅವಶ್ಯಕತೆಯಿಲ್ಲ. ಇದನ್ನು ನಂಬಿದವರು ಮನೆ ಮಠ ಎಲ್ಲವನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಆ ಆಶ್ರಮದಿಂದ ಪರಿವರ್ತನೆಯ ಆಶ್ರಮಕ್ಕೆ ಬಂದ ಮೇಲೆ ಈಗ ಶಾಸಕನಾಗಿದ್ದೇನೆ. ನಾವೆಲ್ಲರೂ ಪರಿಸರದ ಕೂಸು. ನಮ್ಮ ಮೇಲೆ ಅನೇಕ ಘಟನೆಗಳು ಪ್ರಭಾವ ಬೀರುತ್ತವೆ. ಸುಳಿಯಲ್ಲಿ ಗೆದ್ದು ದಡ ಸೇರುಬೇಕಾದರೆ ಮೊದಲು ಮದ್ಯವೆಸನ ತೆಜಿಸಬೇಕು.

ಆದರೆ ಎದ್ದು ಬರುವ ಜನರಿಗಿಂತ ಸುಳಿಯಲ್ಲೇ ಸಿಲುಕುವ ಮಂದಿಯೇ ಹೆಚ್ಚು. ನಿಮಗೆ ಧೈರ್ಯ ಬೇಕು, ಮಾರ್ಗ ದರ್ಶನ ಬೇಕು. ಈ ಸತ್ಕಾರ್ಯವನ್ನು ಶ್ರೀಕ್ಷೇತ್ರದ ಧರ್ಮಸ್ಥಾಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮನುಷ್ಯನಿಗೆ ಕ್ರೂರ ಪ್ರಾಣಿಗಳನ್ನು ಪಳಗಿಸುವ ಸಾಮಥ್ರ್ಯವಿದೆ. ಆದರೆ ನಮ್ಮೊಳಗಿನ ಮನಸ್ಸು ನಿಯಂತ್ರಣ ಮಾಡುವ ಶಕ್ತಿ ಅವನಿಗಿಲ್ಲ. ಸಪ್ತ ವ್ಯಸನದಲ್ಲಿ ಮೊದಲನೆಯದು ಮದ್ಯಪಾನ. ಬಿಟ್ಟರೆ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಮನಸ್ಸಿಗಿಂತ ದೊಡ್ಡದು ಯಾವುದು ಇಲ್ಲ.

ಎಷ್ಟೋ ಜನಕ್ಕೆ ಕುಡಿದಾಗ ಪರಿಜ್ಞಾನವೇ ಇರುವುದಿಲ್ಲ. ಸಂಬಂಧಗಳ ಅರಿವೇ ಇರುವುದಿಲ್ಲ. ಈಗ ಬದುಕು ಬದಲಾಯಿಸುವ ಕಾಲ ಬಂದಿದೆ. ಮನಸ್ಸಿಗೆ ಅಂಟಿರುವ ಪೊರೆ ಕಳಚಲು ಇದೊಂದು ವೇದಿಕೆಯಾಗಿದೆ ಎಂದು ಮದ್ಯ ವೆಸನಿಗಳಿಗೆ ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗಣೇಶ್‍ನಾಯ್ಕ್, ಜನಾರ್ಧನ, ಜಿ.ಎಸ್.ಚಿದಾನಂದ, ರೇವಣ್ಣ, ಲೋಕೇಶ್, ಇಕ್ಬಾಲ್ ಅಹ್ಮದ್ ಖಾನ್, ಪಲ್ಲಾಗಟ್ಟೆ ಶೇಖರಪ್ಪ, ಮಂಜುನಾಯ್ಕ್, ಹಿನ್ನೂರ್ ಸ್ವಾಮಿ, ಚಿಕ್ಕಮ್ಮನಹಟ್ಟಿ ಮಂಜುನಾಥ್, ವೈದ್ಯಾಧಿಕಾರಿಗಳದ ವೆಂಕಟೇಶ್, ನಾಗರಾಜ್ ಸೇರಿದಂತೆ ಅನೇಕರು ಇದ್ದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ಕೆ ಮೆಚ್ಚುಗೆ

ಮದ್ಯವರ್ಜನ ಶಿಬಿರದಲ್ಲಿ ಶಾಸಕ ದೇವೇಂದ್ರಪ್ಪ ಅವರು ಭಜನೆ ಹಾಡಿದ್ದು ಎಲ್ಲರ ಗಮನ ಸೆಳೆಯಿತು. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಭಜನೆ ಹಾಡಿಗೆ ನೃತ್ಯ ಮಾಡಿಸುವ ಮೂಲಕ ದೈಹಿಕ ಕಸರತ್ತು ನೀಡಿ ಆರೋಗ್ಯಕರ ವ್ಯಕ್ತಿಯನ್ನಾಗಿ ಮಾಡಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ಕೆ ಶಾಸಕರು ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!