ಸುದ್ದಿವಿಜಯ, ಜಗಳೂರು: ನಂಜುಂಡಪ್ಪ ವರದಿ ಅನುಸಾರ ನನ್ನ ಕ್ಷೇತ್ರ ಅತ್ಯಂತ ಹಿಂದುಳಿದಿದ್ದು ಸರಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಆರೋಗ್ಯ ಸಚಿವರ ಗಮನ ಸೆಳೆದರು.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಗಮನ ಸೆಳೆಯುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಮನವರಿಕೆ ಮಾಡಿಕೊಟ್ಟರು.
60ವರ್ಷಕ್ಕೂ ಹೆಚ್ಚು ಹಳೆಯದಾದ ಕಟ್ಟಡವಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಡಯಾಲಿಸಿಸ್ ಕೇಂದ್ರದಲ್ಲಿ ಸಮಸ್ಯೆಯಿದೆ. ತಜ್ಞ ವೈದ್ಯರ ಕೊರತೆಯಿದೆ. ಹೀಗಾಗಿ ರೋಗಿಳು ಪರದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸಣ್ಣ ಸಮಸ್ಯೆಗೂ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಹೋಗುವಂತ ಸ್ಥಿತಿ ಇದೆ. ತಕ್ಷಣವೇ ಪರಿಣಾಮಕಾರಿಯಾಗಿ ಮತ್ತು ತುರ್ತಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಜಗಳೂರು ಸಾರ್ವಜನಿಕ ಆಸ್ಪತೆಯ ದುರಸ್ಥಿಗೆ ಸರಕಾರ 3.60 ಕೋಟಿ ರೂ ಮಂಜೂರಾತಿ ನೀಡಿ ತಾಲೂಕು ಆಸ್ಪತ್ರೆ ದುರಸ್ತಿ ಸೇರಿದಂತೆ ರಾಜ್ಯದ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಉತ್ತರಿಸಿದರು.