ಸುದ್ದಿವಿಜಯ, ಜಗಳೂರು: ಸೋಮವಾರ ರಾತ್ರಿ ಸುರಿದಾ ಕೃತ್ತಿಕಾ ಮಳೆಯ ಅಬ್ಬರಕ್ಕೆ ತಾಲೂಕಿನ ಅನೇಕ ಕೆರೆಗಳಿಗೆ ನೀರು ಹರಿದು ಬಂದಿದ್ದು ಚಕ್‍ಡ್ಯಾಂಗಳು ತುಂಬಿ ಅನೇಕ ಕೆರೆಗಳಿಗೆ ಶೇ.30 ರಷ್ಟು ನೀರಿನಿಂದ ಆವೃತ್ತವಾಗಿವೆ.
ತಾಲೂಕಿನ ಗಡಿಮಾಕುಂಟೆ ಕೆರೆಗೆ 6 ಅಡಿ ನೀರು ಬಂದಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳಾದ ಸೊಕ್ಕೆ, ಚಿಕ್ಕ ಉಜ್ಜಿನಿ, ಕ್ಯಾಸೇನಹಳ್ಳಿ, ಲಕ್ಕಂಪುರ ಗ್ರಾಮಗಳ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಲಿದೆ.ತಾಲೂಕಿನ ಹುಚ್ಚವ್ವನಹಳ್ಳಿ ಕೆರೆ ತುಂಬಲು ಇನ್ನು ಎರಡು ಅಡಿ ಬಾಕಿ ಇದ್ದು ತೂಬಿನ ಮಟ್ಟಕ್ಕೆ ನೀರು ಬಂದಿದೆ. ಹೊಳಗಳ ಏರಿ, ಚಕ್ ಡ್ಯಾಂಗಳು ಒಡೆದು ಹೋಗಿವೆ.
ರಾತ್ರಿಯಿಡೀ ಸುರಿದ ಮಳೆಗೆ ದೊಡ್ಡಬೊಮ್ಮನಹಳ್ಳಿ ಗ್ರಾಮದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಅಣಬೂರು ಕೆರೆಗೆ ಸುಮಾರು 7 ಅಡಿಯಷ್ಟು ನೀರು ಹರಿದು ಬಂದಿದೆ.ಜಮ್ಮಾಪುರಕೆರೆಗೆ ಅರಿಶಿಣಗುಂಡಿ ಹಳ್ಳದಿಂದ ಸಾಕಷ್ಟು ನೀರು ಹರಿದು ಬರುತ್ತಿದೆ. ಕೊಲಂಗಟ್ಟೆ ಗ್ರಾಮದ ಬಿ.ಎನ್.ರುದ್ರೇಶ್ ಎಂಬ ರೈತರಿಗೆ ಸೇರಿದ ಮೂರು ಎಕರೆ ಅಡಕೆ ತೋಟದಲ್ಲಿ 40 ಅಡಕೆ ಮರಗಳಿಗೆ ಸಿಡಿಲು ಬಡಿದು ಸುಟ್ಟು ಹೋಗಿವೆ.
ಮನೆಗಳಿಗೆ ಹಾನಿ:
ತಾಲೂಕಿನ ಮರೀಕಟ್ಟೆ, ಮಾಳಮ್ಮನಹಳ್ಳಿ, ಕಮಂಡಲಗುಂದಿ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಮತ್ತು ಕಂದಾಯಾಧಿಕಾರಿ ಧನಂಜಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.