ಸುದ್ದಿವಿಜಯ, ಜಗಳೂರು: ನ.26 ರಂದು ಪಟ್ಟಣದಲ್ಲಿ ಸರಕಾರದ ನಿಯಮ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅನುಸಾರ ಕಟ್ಟುನಿಟ್ಟಾಗಿ ಯಾವುದೇ ಚ್ಯುತಿ ಬರದಂತೆ ಗಣರಾಜ್ಯೋತ್ಸವವನ್ನು ಆಚರಿಸಬೇಕು. ಇಲಾಖಾವಾರು ಕೊಟ್ಟ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೆಲ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗರಂ ಆದ ತಹಶೀಲ್ದಾರ್ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡಲು ಪೂರ್ವಭಾವಿ ಸಭೆ ಕರೆದರೆ ಕೆಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ.
ತಮ್ಮ ಬದಲಿಗೆ ತಮ್ಮ ಇಲಾಖೆಯ ಬೇರೊಬ್ಬ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಹೇಳದೇ ಕೇಳದೇ ರಜೆ ಹಾಕುತ್ತಾರೆ. ಮೀಟಿಂಗ್‍ಗಳ ನೆಪವೊಡ್ಡಿ ತಪ್ಪಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಅವರು ಗಣರಾಜ್ಯೋತ್ಸವ ಆಚರಣೆಯಲ್ಲಿ ಏನಾದರೂ ವ್ಯತ್ಯಾಸ ಆದರೆ ಅದಕ್ಕೆ ತಾಲೂಕು ಆಡಳಿತ ಮತ್ತು ಜವಾಬ್ದಾರಿ ವಹಿಸಿಕೊಂಡ ಇಲಾಖೆ ಅಧಿಕಾರಿಗಳನ್ನೇ ನೇರವಾಗಿ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಚಿತವಾಗಿಯೇ ಎಲ್ಲ ಸರಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಬೇಕು. ಅಂದು ತಮ್ಮ ತಮ್ಮ ಕಚೇರಿಗಳ ಮುಂದೆ ರಾಷ್ಟ್ರಧ್ವಜ ಹಾರಿಸಿದ ನಂತರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಶಾಸಕರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ಧ್ವಜಾರೋಹಣಕ್ಕೂ ಮುಂಚೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಯಲು ರಂಗ ಮಂದಿರದವರೆಗೆ ಮೆರವಣಿಗೆ ಸಾಗಲಿದ್ದು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಬೇಕು ಎಂದು ಸೂಚಿಸಿದರು.
ಬಿಸಿಲು ಹೆಚ್ಚಾಗಿದ್ದು ಮಕ್ಕಳಿಗೆ ಕುಡಿಯುವ ನೀರು ಇತ್ಯಾದಿ ವ್ಯವಸ್ಥೆ ಮಾಡಬೇಕು. ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮತ್ತು ವೇದಿಕೆಯನ್ನು ಅಣಿಗೊಳಿಸಿ. ಸರಕಾರಿ ಕಾರ್ಯಕ್ರಮದ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಿ. ಅಸಡ್ಡೆ ಬೇಡ. ಬರಗಾಲ ಮತ್ತು ಕೋವಿಡ್ ಹಿನ್ನೆಲೆ ಸರಳ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡೋಣ ಎಂದರು.ಸಭೆಗೆ ಎಪಿಎಂಸಿ ಅಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಡಿಪಿಒ, ಅಕ್ಷರದಾಸೋಹ ಇಲಾಖೆ ಅಧಿಕಾರಿಗಳು ಗೈರಾಗಿದ್ದರು.
ಈವೇಳೆ ತಾಪಂ ಇಓ ಕೆ.ಟಿ.ಕರಿಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ತೋಟಗಾರಿಕೆ ಇಲಾಖೆ ಎಸ್‍ಎಡಿಎಚ್ ತೋಟಯ್ಯ,
ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ರೇಷ್ಮೇ ಇಲಾಖೆ ಅಧಿಕಾರಿ ಧನಂಜಯ, ಬಿಸಿಎಂ ಇಲಾಖೆಯ ಆಸ್ಮಾಭಾನು, ಗ್ರಾಮೀಣ ಮತ್ತು ಕುಡಿಯುವ ನೀರು ಎಇಇ ಸಾದಿಕ್ ಉಲ್ಲಾ, ಮೀನುಗಾರಿ ಇಲಾಖೆ ಅಧಿಕಾರಿ ಮಂಜುನಾಥ್,
ಬೆಸ್ಕಾಂ ಎಇಇ ಸುಧಾಮಣಿ, ಜಿಪಂ ವ್ಯವಸ್ಥಾಪಕ ದಾದಾಪೀರ್, ಬಿಇಒ ಈ.ಹಾಲಮೂರ್ತಿ, ಪಿಎಸ್‍ಐ ಮಂಜುನಾಥ್ ಸ್ವಾಮಿ ಸೇರಿದಂತೆ ಅನೇಕರು ಇದ್ದರು.