ಸುದ್ದಿವಿಜಯ, ಜಗಳೂರು: ತಾಲೂಕಿನ ಹೊಸ ಕಾನನಕಟ್ಟೆ ಗ್ರಾಮದ ಜಮೀನೊಂದರಲ್ಲಿ ಖಾಸಗಿ ಕಂಪನಿಯೊಂದು ರೈತನೊಂದಿಗೆ ಸುಳ್ಳು ಅಗ್ರಿಮೆಂಟ್ ಮಾಡಿಕೊಂಡು ಮೋಸ ಮಾಡಿದೆ ಎಂದು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಂಡ್ ಪ್ಯಾನ್ ಅಳಡಿಸಲು ಸುಳ್ಳು ಅಗ್ರಿಮೆಂಟ್ ಮಾಡಿಕೊಂಡು ರೈತರಿಗೆ ಗೊತ್ತಿಲ್ಲದೇ ಕಠಿಣ ಶರತ್ತು ಹಾಕಿಸಿಕೊಂಡು ರಸ್ತೆ ನಿರ್ಮಿಸಿಕೊಂಡಿದೆ ಎಂದು ತಾಲೂಕು ರೈತ ಸಂಘದ ಪದಾಧಿಕಾರಿಗಳು ಕಾಮಗಾರಿ ತಡೆದು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.
ಹೊಸ ಕಾನನಕಟ್ಟೆ ಗ್ರಾಮದ ಜಮೀನಿನ ಪಕ್ಕದಲ್ಲಿ ವಿಂಡ್ಫ್ಯಾನ್ ಅಳವಡಿಸಲಾಗಿದ್ದು ಅಲ್ಲಿಗೆ ವಾಹನಗಳು ಓಡಾಡಲು ರಸ್ತೆ ಅವಶ್ಯಕವಿರುವುದರಿಂದ ತಮ್ಮ ಜಮೀನಿನಲ್ಲಿಯೇ ರಸ್ತೆಗೆ ಅವಕಾಶ ನೀಡಿದ್ದಾರೆ.
ಖಾಸಗಿ ಕಂಪನಿಯ ಅಧಿಕಾರಿಗಳು ಆರಂಭದಲ್ಲಿ 6 ತಿಂಗಳ ಕಾಲ ಮಾತ್ರ ವಾಹನ ಓಡಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದರು ಆದರೆ ಇದೀಗ 30 ವರ್ಷ ಎಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.
ಇದರದಲ್ಲಿ ಕಂಪನಿಯವರು ಮತ್ತು ಅಧಿಕಾರಿಗಳು ನನಗೆ ಮೋಸ ಮಾಡುತ್ತಿದ್ದಾರೆ ಎಂದು ರೈತ ಮಂಜುನಾಥ್ ಆರೋಪಿಸಿದ್ದಾರೆ.
ವರ್ಷದಿಂದಲೂ ಕಾಮಗಾರಿ ನಡೆಯುತ್ತಿದೆ ನಿತ್ಯ ಹತ್ತಾರು ಭಾರಿ ಗಾತ್ರದ ವಾಹನಗಳು ಓಡಾಡುತ್ತಿವೆ. ಈಗ ಬಿತ್ತನೆ ಕಾಲವಾಗಿರುವುದರಿಂದ ಭೂಮಿ ಸಿದ್ದತೆ ಮಾಡಿ ಬಿತ್ತನೆ ಮಾಡಲು ಹೋದರೆ ಅವಕಾಶ ನೀಡದೇ ತೊಂದರೆ ಕೊಡುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಕೆಲಸ ಮಾಡಲು ಬಿಡದೇ ಪೊಲೀಸರಿಗೆ ದೂರು ಕೊಡುತ್ತೇವೆಂದು ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ಅಮಾಯಕ ರೈತರ ಜಮೀನುಗಳಲ್ಲಿ ಈಗಾಗಲೇ ವಿಂಡ್ ಫ್ಯಾನ್ ಹಾಗೂ ಹೈಟೆನ್ಷನ್ ಟವರ್ಗಳನ್ನು ಅಳವಡಿಸಲಾಗಿದ್ದು, ಸುಳ್ಳು ಅಗ್ರಿಮೆಂಟ್ಗಳನ್ನು ಬರೆಸಿಕೊಂಡು ಕಂಪನಿಯ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ.
ಇದನ್ನು ಪ್ರಶ್ನೆ ಮಾಡಿದರೆ ರೈತರ ಮೇಲೆಯ ದಬ್ಬಾಳಿಕೆ ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷಕ್ಕೆ ಅನ್ನದಾತರು ಹೈರಾಣಾಗಿದ್ದಾರೆ. ರೈತರಿಗೆ ರಕ್ಷಣೆ ನೀಡುವ ಪೊಲೀಸರೇ ಕೈ ಚಲ್ಲಿ ಕುಳಿತರೇ ನ್ಯಾಯಾ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.
ಜಮೀನುಗಳಲ್ಲಿ ವಾಹನಗಳು ಓಡಾಡಿಸಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಸರ್ವನಾಶ ಮಾಡಿದ್ದಾರೆ. ಇದರಿಂದ ವಿಂಡ್ ಕಂಪನಿಗಳ ದಬ್ಬಾಳಿಕೆಗೆ ಅನ್ನದಾತರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ದೂರು ನೀಡಿದ್ರೂ ರೈತರ ನೆರವಿಗೆ ಬಂದಿಲ್ಲ ಎಂದರು.
ಗ್ರಾಮ ಪಂಚಾಯತ್ ಅನುಮತಿ ಕೂಡ ಪಡೆದಿಲ್ಲ. ಹೀಗಾಗಿ ಕಂಪನಿಗಳು ತಾವು ಆಡಿದ್ದೇ ಆಟ ಮಾಡಿದ್ದೇ ಕಾನೂನು ಎನ್ನುವಂತಾಗಿದೆ. ಜಗಳೂರು ತಾಲೂಕಿನಲ್ಲಿ ವಿಂಡ್ ಕಂಪನಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅನ್ನದಾತರ ನೆರವಿಗೆ ಧಾವಿಸಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಬೈರನಾಯಕನಹಳ್ಳಿ ರಾಜು, ಮುಖಂಡರಾದ ಕಾನನಕಟ್ಟೆ ತಿಪ್ಪೇಸ್ವಾಮಿ, ಹೊನ್ನೂರು ಅಲಿ, ದಿಬ್ಬದಹಳ್ಳಿ ಗಂಗಾಧರಪ್ಪ, ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು.