ಸುದ್ದಿವಿಜಯ, ಜಗಳೂರು: ಬರಪೀಡಿತ ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ತುಂಗಭದ್ರಾ ನದಿಯಿಂದ ನೀರೆತ್ತುವ ‘ಜಗಳೂರು ಏತ ನೀರಾವರಿ ಯೋಜನೆ’ಯನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮ ಎಂಜಿನಿಯರ್‍ಗಳಿಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು.
ಶನಿವಾರ 57 ಕೆರೆ ನೀರಾವರಿ ಯೋಜನೆಯ ಕಾಮಗಾರಿ ನಡೆಯುವ ದೀಟೂರು, ಚಟ್ನಹಳ್ಳಿ, ರಸ್ತೆಮಾಚಿಕೆರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಬರದ ತಾಲೂಕಿಗೆ ನೀರು ಹರಿಸುವ 57 ಕೆರೆ ಏತ ನೀರಾವರಿ ಯೋಜನೆ ನಮ್ಮ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ.
ಸಿದ್ದರಾಮಯ್ಯ 2018ರಲ್ಲಿ ಸಿಎಂ ಆಗಿದ್ದಾಗ ಘೋಷಣೆ ಮಾಡಿದ ಯೋಜನೆ 5 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಮೊನ್ನೆಯಷ್ಟೇ ಕರ್ನಾಟಕ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಬಂದಿದ್ದೇವೆ.
ಈಗಾಗಲೇ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕವಾಗಿ ಕಾಮಗಾರಿ ಹೇಗೆ ನಡೆಯುತ್ತಿದೆ ಎಂಬ ಕುತೂಹಲವಿತ್ತು ಹೀಗಾಗಿ ಹರಿಹರ ಸಮೀಪದ ದೀಟೂರು ಜಾಕ್‍ವೆಲ್‍ಗೆ ಭೇಟಿ ನೀಡಿ ನಂತರ ಚಟ್ನಹಳ್ಳಿ ಮತ್ತು ರಸ್ತೆ ಮಾಚಿಕೆರೆ ಗ್ರಾಮದ ಬಳಿ ಪೈಪ್ ಸಂಗ್ರಹ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಕಾಮಗಾರಿ ವೀಕ್ಷಣೆ ಮಾಡಿದ್ದೇವೆ ಎಂದರು.
ಕಳೆದ ವರ್ಷ ತುಪ್ಪದಹಳ್ಳಿ ಕೆರೆಗೆ ನೀರು ಬಂದಿದೆ. ಗುತ್ತಿಗೆದಾರರು ಶರವೇಗದಲ್ಲಿ ಕಾಮಗಾರಿ ಮುಕ್ತಾಯ ಮಾಡಲು ಸೂಚನೆ ನೀಡಿದ್ದಾರೆ. ಮೆದಿಕೇರನಹಳ್ಳಿ, ಬಿದರಕೆರೆ ಬಳಿ ಗ್ಯಾಸ್ ಪೈಲ್ ಲೈನ್ ಇರುವ ಕಾರಣ ಅದನ್ನು ಕ್ರಾಸ್ ಮಾಡಲು ಸ್ವಲ್ಪ ಕಾಲ ಸಮಯ ಬೇಕು. ಆರು ಕಿಮೀ ಪೈಪ್ ಲೈನ್ ಕಾಮಗಾರಿ ಮುಗಿದರೆ 30 ಕೆರೆಗಳಿಗೆ ನೀರು ಬರಲಿದೆ. ಗುತ್ತಿಗೆದಾರರು ಪೈಪ್ ಖರೀದಿಗೆ ಆರ್ಡರ್ ಕೊಟ್ಟಿದ್ದಾರೆ. ಅದು ಬಂದರೆ ಜುಲೈ ಅಂತ್ಯಕ್ಕೆ ಕೆರೆಗಳಿಗೆ ಬರಲಿದೆ ಎಂದರು.
ನಾನು ರೈಲು ಬಿಡುವ ಶಾಸಕನಲ್ಲ:
ಕಳೆದ ಐದು ವರ್ಷ ನೀರು ನೀರು ತರುತ್ತೇನೆ ಎಂದು ದಿನಾಂಕ ನಿಗದಿ ಹೇಳಿ ಜನರ ಆಶೋತ್ತರಗಳಿಗೆ ಸ್ಪಂದಿಸದೇ ಸುಳ್ಳು ಹೇಳಿ ರೈಲುಬಿಟ್ಟ ಅಂದಿನ ಶಾಸಕರಂತೆ ನಾನು ಅಲ್ಲ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಶಾಸಕ ದೇವೇಂದ್ರಪ್ಪ ಟಾಂಗ್‍ಕೊಟ್ಟರು.
ನಾನು ನೀರು ತರುವ ಶಾಸಕನಾಗಿ ಕೆಲಸ ಮಾಡುತ್ತೇನೆ. ತರಳಬಾಳು ಜಗದ್ಗುರುಗಳ ಆದೇಶದ ಮೇಲೆ ಎಂಜಿನಿಯರ್‍ಗಳು ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ ಅವುಗಳನ್ನು ಶೀಘ್ರವೇ ಮುಗಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.
ಈ ವೇಳೆ ಕ.ನೀ.ನಿಗದಮ ಎಂಜಿನಿಯರ್‍ಗಳಾದ ಮನೋಜ್, ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಷೀರ್ ಅಹ್ಮದ್, ಕಂಬತ್ತಹಳ್ಳಿ ಮಂಜುನಾಥ್, ಮಾಜಿ ಅಧ್ಯಕ್ಷರಾದ ಸುರೇಶ್‍ಗೌಡ್ರು, ಕೆಪಿಸಿಸಿ ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್, ನಜೀರ್ ಅಹ್ಮದ್, ವಿಜಯ್ ಕೆಂಚೋಳ್, ಪಪಂ ಸದಸ್ಯ ರಮೇಶ್‍ರೆಡ್ಡಿ, ಅರಿಶಿಣಗುಂಡಿ ಮಂಜುನಾಥ್, ಗುತ್ತಿಗೆದಾರ ಸುಧೀರ್‍ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಕೊರಟಿಕೆರೆ ಗುರುಸಿದ್ದನಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.