suddivijayanews5/07/2024
ಸುದ್ದಿವಿಜಯ, ಜಗಳೂರು: ಬರಪೀಡಿತ ಜಗಳೂರು ತಾಲೂಕಿನ ಜಲಸಿರಿ ವೃದ್ಧಿಸುವ 57 ಕೆರೆ ತುಂಬಿಸುವ ದೀಟೂರು ಬಳಿಯಿರುವ ತುಂಗಭದ್ರಾ ಏತ ನೀರಾವರಿ ಯೋಜನೆಯ ನೀರು ಶುಕ್ರವಾರ ಜಗಳೂರು ಪಟ್ಟಣದ ಕೆರೆಗೆ ಆಗಮಿಸಿದ್ದು ಜನರಲ್ಲಿ ಸಂಭ್ರಮ ಮನೆ ಮಾಡಿತ್ತು.
ಮಧ್ಯಾಹ್ನ ಸರಿಯಾಗಿ 12.30ರ ವೇಳೆಗೆ ಪೈಪ್ ಮೂಲಕ ತುಂಗಭದ್ರೆ ಹರಿಯುತ್ತಿದ್ದಂತೆ ಜನ ಕೇಕೆ ಹಾಕಿ ಸಂಭ್ರಮಿಸಿದರು. ನೀರು ಪೈಪ್‍ನ ಕಾರಂಜಿಯಲ್ಲಿ ಚಿಮ್ಮುತ್ತಿರುವುದನ್ನು ನೋಡಲು ತಂಡೋಪತಂಡವಾಗಿ ಆಗಮಿಸಿ ನೀರು ಹರಿಯುವದನ್ನು ನೋಡಿ ಸಂತೋಷ ಪಟ್ಟರು.
ಮೂರು ಮೋಟರ್ ಆನ್: ದೀಟೂರಿನ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಪಂಪ್‍ಹೌಸ್‍ನಲ್ಲಿ ಈಗಾಗಲೇ ಮೂರು ಮೋಟರ್ ಆನ್ ಮಾಡಲಾಗಿದೆ.
ಹೀಗಾಗಿ ಜಗಳೂರು ಮತ್ತು ಅರಸೀಕೆರೆ ಭಾಗದ 30ಕೆರೆಗಳಿಗೆ ನೀರು ಹರಿಯುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮನದ ಎಂಜಿನಿಯರ್ ಳಾದ ಎಸ್.ಶ್ರೀಧರ್ ಮತ್ತು ಎಇ ಆನಂದ್ ಪ್ರತಿಕ್ರಿಯೆ ನೀಡಿದರು.
ನೀರು ಹರಿಯುತ್ತಿರುವ ಕೆರೆಗಳು:ತುಪ್ಪದಹಳ್ಳಿ, ಮುಷ್ಟಿಗಹರಳ್ಳಿಯ ದೊಡ್ಡಕೆರೆ ಮತ್ತು ಸಣ್ಣಕೆರೆ, ಚನ್ನಾಪುರ, ಭೈರನಾಯಕಹಳ್ಳಿ, ಹಿರೇಅರಕೆರೆ, ಚಿಕ್ಕಅರಕೆರೆ, ಜಗಳೂರು, ಬಿಳಿಚೋಡು, ಕಾಟೇನಹಳ್ಳಿ, ಮಾದಹಳ್ಳಿ, ಗೋಡೆ, ತಾರೆಹಳ್ಳಿ, ಉರ್ಲಕಟ್ಟೆ, ಮರೀಕುಂಟೆ, ಚದರಗೊಳ್ಳ, ಕುರೆಮಗಹಳ್ಳಿ, ಯು-ಕಲ್ಲಹಳ್ಳಿ, ಹಳವದಂಡೆ ಮತ್ತು ಕೊರಟಕೆರೆ ಲಂಬಾಣಿ ಹಟ್ಟಿ ಕೆರೆಗಳಿಗೆ ಪ್ರಸ್ತುತ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಶನಿವಾರ ಕೆಳಗೋಡೆ, ಕೆಚ್ಚೇನಹಳಿ, ಬೇವಿನಹಳ್ಳಿ, ಪುಣಬಘಟ್ಟ, ನಂದಿಕಂಬ, ಹಾಲೇಕಲ್ಲು, ಗೌಡಗೊಂಡನಹಳ್ಳಿ, ಕ್ಯಾಸೇನಹಳ್ಳಿ ಮತ್ತು ಚಟ್ನಳ್ಳಿ ಕೆರೆಗಳಿಗೆ ನಾಲ್ಕನೇ ಮೋಟರ್ ಆನ್ ಮಾಡಿ ನೀರು ಹರಿಸಲಾಗುವುದು ಎಂದರು.
ಉಳಿದಂತೆ 15 ದಿನಗಳಲ್ಲಿ ಬಿಸ್ತುವಳ್ಳಿ, ರಸ್ತೆ ಮಾಕುಂಟೆ ಮತ್ತು ಮಠದ ದ್ಯಾಮವ್ವನಹಳ್ಳಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇನ್ನು ಒಂದು ತಿಂಗಳ ಒಳಗೆ ಜಗಳೂರು ತಾಲೂಕಿನ 53 ಕೆರೆಗಳಿಗೆ ನೀರು ಹರಿಸುತ್ತೇವೆ.
120 ದಿನಗಳ ಕಾಲ ಸಮಯವಿದ್ದು ನಿಯಮದಂತೆ ಕೆರೆಗಳನ್ನು ಶೇ.50ರಷ್ಟು ತುಂಬಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಇಲ್ಲಿಯವರೆಗೂ ಯಾವುದೇ ತಾಂತ್ರಿಕ ತೊಂದರೆಯಾಗಿಲ್ಲ.
ಸಣ್ಣಪುಟ್ಟ ತೊಂದರೆಯಾದರೆ ಶೀಘ್ರವೇ ಸರಿಪಡಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಎಂಜಿನಿಯರ್‍ಗಳು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ಬಂದು 76 ವರ್ಷಗಳಾದ ಮೇಲೆ ತಾಲೂಕಿಗೆ ತುಂಗಭದ್ರೆ ಹರಿದಿದ್ದು ಸಂತೋಷಾಗಿದೆ. ಜಾತ್ರೆಗೆ ಸೇರುವಂತೆ ಜನ ಬಂದು ಕೆರೆಯ ನೀರನ್ನು ನೋಡಿ ಸಂಭ್ರಮಿಸುತ್ತಿದ್ದಾರೆ ಎಂದು ನೀರಾವರಿ ಹೋರಾಟಗಾರರಾದ ಆರ್.ಓಬಳೇಶ್ ಸಂತೋಷ ವ್ಯಕ್ತಪಡಿಸಿದರು.
ಸ್ಥಳಕ್ಕೆ ಮುಖಂಡರಾದ ಎಂ.ಡಿ.ಕೀರ್ತಿಕುಮಾರ್, ಹೋರಾಟಗಾರರಾದ ಸತ್ಯಮೂರ್ತಿ, ಪ್ರೊ.ನಾಗಲಿಂಗಪ್ಪ, ನೂರ್‍ಅಹಮದ್, ವಕೀಲ ಡಿ.ವಿ.ನಾಗಪ್ಪ, ಅರಿಶಿಣಗುಂಡಿ ಮರುಳಸಿದ್ದಪ್ಪ, ಅಜ್ಜಯ್ಯ ಸೇರಿದಂತೆ ಅನೇಕರು ಭೇಟಿ ನೀಡಿ ಸಂಭ್ರಮಿಸಿದರು.